Home ಜಿಲ್ಲೆ ಮೈಸೂರು ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಶಾಸಕ ಮಂಜು ಸೂಚನೆ

ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಶಾಸಕ ಮಂಜು ಸೂಚನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.24:
ಹೇಮಾವತಿ ಜಲಾಶಯದಿಂದ ಸಾಹುಕಾರ್ ಚೆನ್ನಯ್ಯ ಮುಖ್ಯ ನಾಲೆಯ ಮೂಲಕ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸಲಾಗುತ್ತಿರುವ ಬಗ್ಗೆ ಶಾಸಕ ಹೆಚ್.ಟಿ.ಮಂಜು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ಧೃಡ ಪಡಿಸಿಕೊಂಡರು.
ಅವರು ತಾಲ್ಲೂಕಿನ ವಿವಿಧ ನಾಲಾ ಭಾಗಗಳಿಗೆ ಭೇಟಿ ನೀಡಿ


ಯಾವ ಯಾವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ ಎಂಬುದನ್ನು ವೀಕ್ಷಿಸಿ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿ ಕಾಲುವೆಗಳಲ್ಲಿ ಶಿಲ್ಟ್ ಹಾಗೂ ಜಂಗಲ್ ಬೆಳೆದಿರುವುದನ್ನು ಗಮನಿಸಿದ ಶಾಸಕ ಹೆಚ್.ಟಿ.ಮಂಜು ನೀರು ಸರಾಗವಾಗಿ ಹರಿಯಲು ತೊಂದರೆಯಾಗದಂತೆ ತಕ್ಷಣವೇ ಕಾಲುವೆಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಹರಿಯುವ ಮಾರ್ಗದಲ್ಲಿ ಅಡಚಣೆಗಳಿದ್ದರೆ ಕೂಡಲೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿ


ಎಲ್ಲಾ ಕೆರೆಕಟ್ಟೆಗಳನ್ನು ಈ ಭಾರಿ ತುಂಬಿಸಲಾಗುವುದು ಹಾಗಾಗಿ ತಾಲ್ಲೂಕಿನ ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಈ ವರ್ಷ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪ್ರಮಾಣದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದೇನೆ. ಆದ್ದರಿಂದ ಹೇಮಾವತಿ ನದಿಯಿಂದ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಒಂದೆರಡು ದಿನ ತಡವಾದರೂ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ಶೇ.100ರಷ್ಟು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.


ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನೀರಿನ ಲಭ್ಯತೆ ಹಾಗೂ ಕೆರೆಗಳ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು ಎಂದು ಶಾಸಕ ಹೆಚ್.ಟಿ. ಮಂಜು ತಿಳಿಸಿದರು.
ಈ ಸಮಯದಲ್ಲಿ ಹೇಮಾವತಿ ನೀರಾವರಿ ಇಲಾಖೆಯ ನಂ.03ರ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಎಇಇ ಪ್ರಸನ್ನ, ವಿಶ್ವನಾಥ್, ಅಶೋಕ್, ಸೇ ರಿದಂತೆ ನೀರಾವರಿ ಇಲಾಖೆಯ ಎಲ್ಲಾ ಇಂಜಿನಿಯರುಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.