
ಮನೋಮೂರ್ತಿ ಮ್ಯೂಸಿಕ್‌ನಲ್ಲಿ ಹಾಡುಗಳ ಬಿಡುಗಡೆ
ಕನ್ನಡ ಚಿತ್ರರಂಗದ ಯಶಸ್ವಿ ಸೃಜನಶೀಲ ಜೋಡಿಗಳಲ್ಲಿ ಒಂದಾದ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತೊಮ್ಮೆ ಒಂದಾಗಿದ್ದಾರೆ. ಅವರ ಬಹುನಿರೀಕ್ಷಿತ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಸಂಗೀತ ಬಿಡುಗಡೆ ಕುರಿತು ವಿಶೇಷ ಘೋಷಣೆ ಮಾಡಿ, ಫ್ರೆಂಡ್‌ಶಿಪ್ ಡೇಗೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.
ಆಗಸ್ಟ್ 2ರ ಫ್ರೆಂಡ್‌ಶಿಪ್ ಡೇ ಅಂಗವಾಗಿ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಮ್ಯೂಸಿಕ್ ಚಾನೆಲ್ ಮೂಲಕ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಹಲವು ವರ್ಷಗಳಿಂದ ಸ್ನೇಹ ಮತ್ತು ಸಂಗೀತದ ಮೂಲಕ ಸಿನಿಪ್ರೇಮಿಗಳನ್ನು ರಂಜಿಸಿರುವ ಈ ಜೋಡಿ, ಮತ್ತೊಮ್ಮೆ ಹೊಸ ಸಂಗೀತದ ಅನುಭವ ನೀಡಲು ಸಜ್ಜಾಗಿದೆ.
ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ ಹಾಗೂ ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವು ಚಿತ್ರಗಳ ಮೂಲಕ ನಾಗತಿಹಳ್ಳಿ–ಮನೋ ಮೂರ್ತಿ ಜೋಡಿ ಕನ್ನಡ ಚಿತ್ರರಂಗಕ್ಕೆ ನೆನಪಿನಲ್ಲಿ ಉಳಿಯುವ ಹಾಡುಗಳನ್ನು ಕೊಟ್ಟಿದೆ. ಈಗ ಅದೇ ಜೋಡಿ ‘ಅಮೆರಿಕಾ ಅಮೆರಿಕಾ 2’ ಮೂಲಕ ಮತ್ತೊಮ್ಮೆ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಹಾಗೂ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಮೇಲೂ ಈಗಾಗಲೇ ನಿರೀಕ್ಷೆ ಮೂಡಿದೆ.































