
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.26 ಇಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಶಾಸಕ ಕೆ ನೇಮಿರಾಜ್ ನಾಯ್ಕ್ ಶುಕ್ರವಾರ ಚಾಲನೆ ನೀಡಿದರು
ಪಾದಗಟ್ಟೆ ಆಂಜನೇಯ ಆಂಜನೇಯ ದೇವಸ್ಥಾನ ಆವರಣದಲ್ಲಿ 13 ನೇ ವರ್ಷದ ಹಿಂದೂ ಮಹಾ ಗಣಪತಿಯನ್ನು 12 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣಪ ಮೂರ್ತಿಯನ್ನು ಬೆಳ್ಳಿ ರಥದಲ್ಲಿರಿಸಿ ತೇರು ಬೀದಿ ರಾಷ್ಟ್ರೋತ್ಥಾನ ರಸ್ತೆ ಮೂಲಕ ಕೂಡ್ಲಿಗಿ ಸರ್ಕಲ್, ಕೊಟ್ಟೂರು ಸರ್ಕಲ್, ಬೈಪಾಸ್ ಸರ್ಕಲ್, ಬಸವೇಶ್ವರ ಬಜಾರ ಮೂಲಕ ಬಸವೇಶ್ವರ ಸರಕಾರ ಮತ್ತು ಹಳೆ ಊರು ಚೆನ್ನಮ್ಮ ಸರ್ಕಲ್ ಅವರಿಗೆ ಅದ್ದೂರಿ ಮೆರವಣಿಗೆ ಆರಂಭಗೊಂಡಿತು. ಕೇಸರಿ ಪೇಟ, ಶಾಲು ಧರಿಸಿದ್ದ ಸಂಘಟಕರು, ತಾಲೂಕಿನೆಲ್ಲೆಡೆಯಿಂದ ಬಂದಿದ್ದ ಯುವಸಮೂಹ ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಬ್ಬರದ ಸಂಗೀತದ ಜತೆಗೆ ಜಯಘೋಷಗಳು ಮೊಳಗಿದವು.
ಜಾನಪದ ತಂಡಗಳಾದ ಸಮಾನ ನಂದಿ ಕೋಲು ಡೊಳ್ಳು ಮಹಿಳಾ ಡೊಳ್ಳು ಕಹಳೆ ವಾದನ ಮರಗಾಲು ಕುಣಿತ ಹಾಗೂ ಕೋಲಾಟ ತಂಡದ ಯುವಕರು ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.
ಪ್ರಮುಖ ರಸ್ತೆಗಳಲ್ಲಿ ಸಾಗಿದ ಗಣಪನಿಗೆ ದಾರಿಯುದ್ದಕ್ಕೂ ಭಕ್ತರಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದರು. ಮೆರವಣಿಗೆ ಮಾರ್ಗದಲ್ಲಿ ಕೇಸರಿ ಬಾವುಟ, ಬಂಟಿಂಗ್ಲಗಳು ರಾರಾಜಿಸಿದವು. ಮಾಜಿ ಶಾಸಕ ಎಸ್. ಭೀಮ ನಾಯ್ಕ್ ಹಾಗೂ ಹಾಲಿ ಶಾಸಕ ಕೆ. ನೇಮಿರಾಜ್ ನಾಯ್ಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಯಾವುದೇ ಘಟನೆ ನಡೆಯದಂತೆ ಗುಂಪುಗಳ ನಡುವೆ ಪೊಲೀಸರು ಸರ್ಪಗಾವಲು ಹಾಕಲಾಗಿತ್ತು. ಮಕ್ಕಳು ಸೇರಿದಂತೆ ಮಹಿಳೆಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಭೇಟಿ ನೀಡಿದರು. ಮೆರವಣಿಗೆ ಉದ್ದಕ್ಕೂ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ವಿಕಾಸ್ ಲಂಬಾಣಿ ಸೇರಿ ನೂರಾರು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪ್ರತಿಯೊಂದು ಸರ್ಕಲ್ ಸೇರಿ, ಮುಖ್ಯ ರಸ್ತೆಗೆ ಸಿ ಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಬೈಪಾಸ್ ಸರ್ಕಲ್ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಮೂಲಕ ಯಾವುದೇ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು .























