
ರಿಯಾದ್ , ಅ.22- ಸೌದಿ ಅರೇಬಿಯಾದಲ್ಲಿರುವ ಸೌದಿ ಅರಾಮ್ಕೊ ತೈಲ ಘಟಕವನ್ನು ಗುರಿಯಾಗಿ ಸಿಕೊಂಡು ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಅಮೆರಿಕವು ಸೌದಿ ಅರೇಬಿಯಾದಲ್ಲಿರುವ ತುರ್ತು ಸೇವೆಯಲ್ಲಿಲ್ಲದ ಸರ್ಕಾರಿ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ದೇಶ ತೊರೆಯುವಂತೆ ಸೂಚಿಸಿದೆ.
ಡ್ರೋನ್ ಅವಶೇಷ ಬಿದ್ದು ಬೆಂಕಿ
ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿರುವ ಶೈಬಾ ತೈಲಕ್ಷೇತ್ರದ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆದಿತ್ತು. ಸೌದಿ ವಾಯು ರಕ್ಷಣಾ ಪಡೆಗಳು ಡ್ರೋನ್ ಅನ್ನು ತಡೆದಿದ್ದು, ಅದರ ಅವಶೇಷಗಳು ತೈಲಕ್ಷೇತ್ರದ ಹೊರವಲಯದಲ್ಲಿದ್ದ ಗುತ್ತಿಗೆದಾರರ ವಾಹನದ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ.
ಡ್ರೋನ್ ಅವಶೇಷಗಳಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರೂ, ಶೈಬಾ ತೈಲಕ್ಷೇತ್ರದ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಸೌದಿ ಅರೇಬಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಸಿಬ್ಬಂದಿಗೆ ದೇಶ ತೊರೆಯಲು ಸೂಚನೆ
ಸೌದಿ ಅರೇಬಿಯಾದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಸೇವೆಯಲ್ಲಿಲ್ಲದ ಅಮೆರಿಕ ಸರ್ಕಾರಿ ಸಿಬ್ಬಂದಿ ಹಾಗೂ ಅವರ ಕುಟುಂಬದವರು ದೇಶ ತೊರೆಯುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಆದೇಶಿಸಿದೆ.
ಯೆಮನ್ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗಾಟ್ ತಿಳಿಸಿದ್ದಾರೆ.
























