
ಸಂಜೆವಾಣಿ ವಾರ್ತೆ
ಹನೂರು.ಸೆ.21:- ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಹಲವು ವರ್ಷಗಳಿಂದ ಮಳೆ ಕೊರತೆ ಮತ್ತು ನೀರಿನ ಅಭಾವದಿಂದ ಸಂಕಷ್ಟ ಎದುರಿಸುತ್ತಿದ್ದ ಈ ಭಾಗದ ರೈತರಿಗೆ ಕೆರೆ ಭರ್ತಿಯಾಗಿರುವುದು ಸಂತಸ ತಂದಿದೆ. ಕಳೆದ ಎರಡು ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಮೂಲಕ ನೀರು ಹಳ್ಳದ ಮೂಲಕ ಹರಿಯುತ್ತಿದ್ದು, 25 ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗಿದೆ.
ಇದೇವೇಳೆ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು ರಾಮನಗುಡ್ಡ ಕೆರೆಗೆ ನೀರು ತುಂಬಿಸುವುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಕಾವೇರಿ ನದಿ ಮೂಲದಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕೈಗೊಂಡಿದ್ದು ನನ್ನ ಶ್ರಮದ ಫಲ. ಭಗವಂತ ಉತ್ತಮ ಮಳೆಯನ್ನು ನೀಡಿದ್ದರಿಂದ ಈ ಭಾಗದ ಎಲ್ಲ ಕೆರೆಕಟ್ಟೆಗಳು ತುಂಬಿವೆ.
ಬರಗಾಲದ ಸಂದರ್ಭದಲ್ಲಿ ರೈತರು ನೀರಿನ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಕಾವೇರಿ ಮೂಲಕ ಕೆರೆಗೆ ನೀರು ಹರಿಸುವ ಮೂಲಕ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಹನೂರು ಕ್ಷೇತ್ರದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ.
ರಾಮನಗುಡ್ಡ ಕೆರೆ ಸುಮಾರು 40 ಎಂ.ಸಿ.ಎಫ್.ಟಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದ್ದು, ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸಾಮಥ್ರ್ಯ ಹೊಂದಿದೆ. ಕೆರೆ ಭರ್ತಿಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೋರ್‍ವೆಲ್‍ಗಳಿಗೂ ಅನುಕೂಲವಾಗಲಿದೆ. ಕೆರೆಯಿಂದ ಹಳ್ಳದ ಮೂಲಕ ಹರಿಯುವ ನೀರಿನಿಂದ ಸಣ್ಣಪುಟ್ಟ ಕೆರೆಗಳು, ಚೆಕ್‍ಡ್ಯಾಂಗಳು ಭರ್ತಿಯಾಗುತ್ತಿವೆ ಎಂದರು.
ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಅವರು ಉಡುತೊರೆ ಜಲಾಶಯ ಅಭಿವೃದ್ಧಿಗೆ ಸರ್ಕಾರ 490 ಕೋಟಿ ರೂ.
ಅನುದಾನ ಘೋಷಿಸಿದೆ. ಹುಬ್ಬೇ ಹುಣಸೆ ಡ್ಯಾಂ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಹನೂರು ಪಟ್ಟಣದಲ್ಲಿ 50 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಅನುದಾನಕ್ಕೆ ಮನವಿ ಮಾಡಲಾಗಿದೆ. ಪಿ.ಜಿ.ಪಾಳ್ಯ, ಒಡೆಯರಪಾಳ್ಯ, ಗೋಪಿನಾಥಂ ಭಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಕಾಡಾ ಆಡಳಿತ ಇಂಜಿನಿಯರ್ ಮಹೇಶ್, ಕಾವೇರಿ ನೀರಾವರಿ ನಿಗಮದ ಇ.ಇ ಉಮೇಶ್, ಎ.ಇ.ಇ ರಾಮಕೃಷ್ಣ, ಕರುಣಾಮಯಿ, ಸಣ್ಣ ನೀರಾವರಿ ಇಲಾಖೆಯ ಎಡಬ್ಲ್ಯೂ ಅಭಿಲಾಷ್, ಎಇ ಪ್ರತಾಪ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ಉದ್ದನೂರು ಪ್ರಸಾದ್, ಮಂಡ್ಯ ಫಾರ್ಮ್ ರಾಮಚಂದ್ರ, ಮಾಜಿ ಜಿ.ಪಂ. ಸದಸ್ಯರಾದ ಬಾಬು, ಶಿವಪ್ಪ, ಮುಖಂಡರಾದ ಜೆಡಿಎಸ್ ಜಿಲ್ಲಾ ವಕ್ತಾರ ಅಕ್ರಮ್, ಜೇಸಿಮ್ ಪಾಷ, ರೈತ ಸಂಘಟನೆಯ ಕರಿಯಪ್ಪ, ಅಮ್ಜದ್ ಖಾನ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ವೆಂಕಟೇಗೌಡ ಸೇರಿದಂತೆ ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.


































