ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜು.1: ತಾಲೂಕು ಕೇಂದ್ರ ಕೆ.ಆರ್.ನಗರ ಪಟ್ಟಣಕ್ಕೆ ಹೊಂದಿಕೊಂಡಿದ್ದರು ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಕಂಕಣಬದ್ಧನಾಗಿದ್ದು ಹಂತ ಹಂತವಾಗಿ ಅನುದಾನ ಕೊಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದ ಮಾರಮ್ಮನವರ ದೇವಾಲಯದ 5ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ಕಾಳೇನಹಳ್ಳಿ, ಕೆಂಪನಕೊಪ್ಪಲು ಮತ್ತು ಮಾರಿಗುಡಿಕೊಪ್ಪಲು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದರು.
ನಾಲ್ಕು ಗ್ರಾಮಗಳ ಮಧ್ಯೆ ಭಾಗದ ಮುಳ್ಳೂರು ರಸ್ತೆಯ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ಗ್ರಾಮಪರಿಮಿತಿಯ ಪ್ರಮುಖ ಬೀದಿಗಳನ್ನು ಸಿ.ಸಿ.ರಸ್ತೆ ಮತ್ತು ಬಾಕ್ಸ್ ಚರಂಡಿ ಮಾಡಲು ತಲಾ 25ಲಕ್ಷ ರೂ. ಅನುದಾನ ಮಂಜೂರು ಮಾಡಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಹೊಸಕೊಪ್ಪಲು ಮಾರಮ್ಮನವರ ದೇವಸ್ಥಾನದ ಆವರಣದ ಕಾಂಕ್ರೀಟಿಕರಣ ಹಾಗೂ ಕಾಪೌಂಡ್ ನಿರ್ಮಾಣ ಮಾಡಲು 10 ಲಕ್ಷರೂ. ಅನುದಾನ ನೀಡಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಗ್ರಾಮದ ಸುತ್ತ ಹೊಸ ಬಡಾವಣೆಗಳು ನಿರ್ಮಾಣ ವಾಗುತ್ತಿರುವುದರಿಂದ ಗ್ರಾಮಕ್ಕೊಂದು ಸಶ್ಮಾನದ ಅವಶ್ಯಕತೆ ಇದ್ದು ಸರ್ಕಾರಿ ಜಾಗವನ್ನು ಗುರುತಿಸಿ ಮಸಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಬೇಕೆಂದು ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ಕೆ.ಪಿ.ಜಗದೀಶ್, ಮಹದೇವ್, ಮುಖಂಡರಾದ ಹೆಚ್.ಪಿ.ಸ್ವಾಮಿ, ರಾಮೇಗೌಡ, ಕುಮಾರ್, ದೇವೆಂದ್ರ, ಸಿದ್ದೇಗೌಡ, ಕೆ.ಎಸ್.ಮಂಜುನಾಥ್, ಕೆ.ಎಂ.ಶರತ್, ಶಂಕರ್, ಚಿಕ್ಕತಮ್ಮೇಗೌಡ, ಪುಟ್ಟರಾಮು, ಪ್ರಕಾಶ್, ಪುಟ್ಟಸ್ವಾಮಿ, ಗಿರೀಶ್, ಶಿವರಾಮು, ಮಾದೇಗೌಡ, ಮಹದೇವ್, ಪಿಡಿಓಮಂಜುನಾಥ್, ಕಾರ್ಯದರ್ಶಿ ಸೋಮಶೇಖರ್ ಮತ್ತಿರರು ಹಾಜರಿದ್ದರು.


































