
ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
ಲವ್, ಸೆಂಟಿಮೆಂಟ್ ಹಾಗೂ ಆಕ್ಷನ್ ಅಂಶಗಳೊಂದಿಗೆ ಸಿದ್ಧವಾಗುತ್ತಿರುವ ಲೂಸ್ ಮಾದ ಯೋಗಿ ಅಭಿನಯದ 51ನೇ ಸಿನಿಮಾ ‘ಫಾರೆವರ್’ ಇದೀಗ ಚಿತ್ರೀಕರಣದ ವೇಗ ಹೆಚ್ಚಿಸಿಕೊಂಡಿದೆ. ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪೂರ್ಣಗೊಂಡಿದ್ದು, ಮೂರನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ.
ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ. ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ‘ಚಂದ್ರಿಕ’ ಖ್ಯಾತಿಯ ಯೋಗೇಶ್ ಎಂ. ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡನೇ ಹಂತದಲ್ಲಿ ಮಾತಿನ ಭಾಗದ ಚಿತ್ರೀಕರಣದ ಜತೆಗೆ ಎರಡು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಅವರ ಸಂಯೋಜನೆಯಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶ ಹಾಗೂ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆಯ ಹಾಡೊಂದನ್ನು ಚಿತ್ರೀಕರಿಸಲಾಗಿದೆ.
ನಾಯಕ ಲೂಸ್ ಮಾದ ಯೋಗಿ, ನಾಯಕಿ ಆಕಾಂಕ್ಷ ರಾವ್, ಪ್ರಮೋದ್ ಶೆಟ್ಟಿ, ವಿಜಯ್ ಚೆಂಡೂರ್, ಗೌರವ್ ಶೆಟ್ಟಿ, ಅಶ್ವಿನ್ ಪಲ್ಲಕ್ಕಿ, ಮಾಲಾ, ಕಡ್ಡಿಪುಡಿ ಚಂದ್ರು, ಅನಂತ್ ಸೇರಿದಂತೆ ಪ್ರಮುಖ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕ ಯೋಗೇಶ್ ಎಂ. ಅವರೇ ಬರೆದಿದ್ದು, ರಘು ನಿಡುವಳ್ಳಿ ಸಂಭಾಷಣೆ ರಚಿಸಿದ್ದಾರೆ. ಪ್ರದ್ಯೂತನ್ ಸಂಗೀತ ನಿರ್ದೇಶನ ಹಾಗೂ ಸಂಕೇತ್ ಛಾಯಾಗ್ರಹಣ ಚಿತ್ರಕ್ಕಿದೆ.
ಈಗಾಗಲೇ ಬಿಡುಗಡೆಯಾಗಿರುವ ‘ಫಾರೆವರ್’ ಚಿತ್ರದ ಫಸ್ಟ್ ಲುಕ್ ಕುತೂಹಲ ಮೂಡಿಸಿದ್ದು, ಯೋಗಿ ವಿಭಿನ್ನ ಗೆಟಪ್ನಲ್ಲಿ ಬೈಕ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಿ, ಭಾವನೆ ಮತ್ತು ಆಕ್ಷನ್ನ ಸಮಬಲದೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.























