Home ಜಿಲ್ಲೆ ಮೈಸೂರು ದ್ರೋಣನಗಿರಿ ಡಾ.ರಾಜೇಂದ್ರ ಶ್ರೀಗಳ 111ನೇ ಜಯಂತಿ ಮಹೋತ್ಸವ

ದ್ರೋಣನಗಿರಿ ಡಾ.ರಾಜೇಂದ್ರ ಶ್ರೀಗಳ 111ನೇ ಜಯಂತಿ ಮಹೋತ್ಸವ

ಸಂಜೆವಾಣಿ ವಾರ್ತೆ
ಹನೂರು /ಬರಗೂರು ಅ 10 :-
ಬಸವಕೇಂದ್ರ ಹನೂರು ತಾಲೂಕು ಹಾಗೂ ಜಿಲ್ಲಾ ಬಸವಕೇಂದ್ರಗಳ ಸಹಯೋಗದಲ್ಲಿ ಶ್ರೀಮನ್ ಮಹಾರಾಜ ರಾಜಗುರು ತಿಲಕ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳವರ 111 ನೇ ಜಯಂತಿ ಮಹೋತ್ಸವ ಹಾಗೂ ಅಂತರರಾಜ್ಯ ಶರಣ ಸಂಗಮ ಕಾರ್ಯಕ್ರಮ ನೆರೆಯ ತಮಿಳುನಾಡಿನ ಈರೋಡ್ ಜಿಲ್ಲೆಯ ಹಂಡಿಯೂರು ತಾಲೂಕಿನ ಬರಗೂರು ಸಮೀಪದ ದ್ರೋಣನಗಿರಿ ಮಠದಲ್ಲಿ (ಮಡಂ) ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವಪುರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಪೆÇ್ರ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು,


“ಅನ್ನ, ಅಕ್ಷರ, ಜ್ಞಾನಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ. ದೇಶದಾದ್ಯಂತ ಕೋಟ್ಯಂತರ ಬಡವರ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನ ಅವರು. ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಉಚಿತ ಊಟ-ವಸತಿಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಸಂಸ್ಕಾರ ಕಲಿಸಿದರು.


ಜನರ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಆಸ್ಪತ್ರೆಗಳನ್ನು ನಿರ್ಮಿಸಿದರು. ಕಾಯಕದ ಮಹತ್ವ ಸಾರಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದರು. ಸಂವಾದ, ಪ್ರವಚನ, ಸಾಮೂಹಿಕ ಲಿಂಗ ದೀಕ್ಷೆಯ ಮೂಲಕ ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿದರು. ರೈತ ವರ್ಗದ ಅನುಕೂಲಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ, ಜಾತ್ರಾ ಸಂದರ್ಭಗಳಲ್ಲಿ ಕೃಷಿ ಪರಿಕರಗಳ ವಸ್ತು ಪ್ರದರ್ಶನ, ದನಗಳ ಪರಿಷೆ, ಬಿತ್ತನೆ ಬೀಜ ಸಂರಕ್ಷಣೆ ಸೇರಿದಂತೆ ರೈತೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುತ್ತೂರು ಮಠ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ತೊಡಗಿಸಿಕೊಂಡಿದೆ ಎಂದರು.


ದ್ರೋಣನಗಿರಿ ಮಠಾಧ್ಯಕ್ಷರಾದ ಪೂಜ್ಯಶ್ರೀ ಅಶೋಕರಾಜೇಂದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಎನ್.ಆರ್.ಪಿ. ಮಹದೇವಸ್ವಾಮಿ, ಹನೂರು ತಾಲೂಕು ಬಸವ ಕೇಂದ್ರ ಅಧ್ಯಕ್ಷ ಕಣ್ಣೂರು ವೃಷಭೇಂದ್ರಸ್ವಾಮಿ, ವಿಶ್ವ ವಚನ ಫೌಂಡೇಶನ್ ಅಧ್ಯಕ್ಷ ವಚನ ಕುಮಾರಸ್ವಾಮಿ, ವೇದಮೂರ್ತಿ, ಮಲ್ಲಿಕಾರ್ಜುನಸ್ವಾಮಿ, ಗುರುಸ್ವಾಮಿ, ವೀರಭದ್ರಸ್ವಾಮಿ, ಮಲ್ಲೇಶಪ್ಪ, ನಂದೀಶ್, ಮಹೇಂದ್ರ, ಪಟ್ಟಣ ತಿಮ್ಮರಾಜೀಪುರ, ಸೋಮಶೇಖರ್, ಮಾತೃಭೂಮಿಮೂರ್ತಿ, ಮನೋಜ್ ಪಟೇಲ್ ಸೇರಿದಂತೆ ನೂರಾರು ಬಸವ ಅಭಿಮಾನಿಗಳು, ಶರಣರು ಭಾಗವಹಿಸಿದ್ದರು.