Home ಮುಖಪುಟ ಸುದ್ದಿ ಯೋಗೇಶ್‌ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು

ಯೋಗೇಶ್‌ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು

ಬೆಂಗಳೂರು,ಜು.೩೧- ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ,ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಜಾಮೀನು ನೀಡಿದೆ.


ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿರುವ ಹೈಕೋರ್ಟ್ ಐದು ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಭದ್ರತೆ ಜೊತೆ ಶಿಕ್ಷಾ ಬಂಧಿಯನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅನುಮತಿಸಿದೆ.


ಇದೇ ವೇಳೆ ವಿನಯ್ ಕುಲಕರ್ಣಿ ದೋಷಿ ಎಂದು ಪ್ರಕಟಿಸಿದ್ದ ತೀರ್ಪಿಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಹೈಕೋರ್ಟ್ ಪೀಠವು ತಡೆಯಾಜ್ಞೆ ನೀಡಲಾಗಿದೆ. ಇದೇ ವೇಳೆ ಧಾರವಾಡಕ್ಕೆ ಪ್ರವೇಶಕ್ಕೆ ನಿರ್ಬಂಧ ನೀಡಲು ಹೈಕೋರ್ಟ್ ನಿರಾಕರಿಸಿ ವಿದೇಶಕ್ಕೆ ತೆರಳಬಾರದು ಎನ್ನುವ ಷರತ್ತನ್ನು ವಿಧಿಸಿದೆ.
ಸಿವಿ ನಾಗೇಶ್ ವಾದ:
ಅಲ್ಲದೇ ವಿನಯ್ ಕುಲಕರ್ಣಿ ಜೊತೆಗೆ ೧೦ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಚನ್ನಕೇಶವ ಟಿಂಗರಿಕರ್‌ಗೂ ಜಾಮೀನು ದೊರೆತಿದೆ.
ಆದೇಶಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಪರ ವಕೀಲ ಸುನೀಲ್ ಪ್ರತಿಕ್ರಿಯೆ ನೀಡಿ ಪ್ರಕರಣದ ಸಂಬಂಧ ನಾವು ಎರಡು ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ನಮ್ಮ ಅರ್ಜಿಯನ್ನು ಪುರಸ್ಕರಿಸಿದೆ. ವಿನಯ್ ಕುಲಕರ್ಣಿ ಪರ ಸಿವಿ ನಾಗೇಶ್ ವಾದ ಮಾಡಿದ್ದರು. ವಿನಯ್ ಕುಲಕರ್ಣಿ ಪಾತ್ರ ಇಲ್ಲ ವೆಂದು ವಾದ ಮಾಡಿದ್ದೆವು’ ಎಂದು ತಿಳಿಸಿದರು.
ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಜಾಮೀನು ಸಂಬಂಧ ದೃಢೀಕೃತ ಪತ್ರ ಇನ್ನೂ ಕೈಸೇರಿಲ್ಲ. ಆದೇಶದ ದೃಢೀಕೃತ ಪತ್ರ ಸಿಕ್ಕ ನಂತರ ಕೆಳಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸ್ತೇವೆ ಎಂದು ಎಂದರು.


ಕಾನೂನು ಹೋರಾಟ:

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸೆಷನ್ ಕೋರ್ಟ್ ವಿನಯ್ ಕುಲಕರ್ಣಿಗೆ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ವಿನಯ್ ಕುಲಕರ್ಣಿ ಸತತವಾಗಿ ಕಾನೂನು ಹೋರಾಟ ಮಾಡಿದ್ದರು.


ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.


ಇಂದು ಹೈಕೋರ್ಟ್ ಸೆಷನ್ ಕೋರ್ಟ್ ಶಿಕ್ಷೆ ಎತ್ತಿಹಿಡಿದರೆ ವಿನಯ್ ಕುಲಕರ್ಣಿ ಶಾಸಕ ಸ್ಥಾನವೂ ರದ್ದಾಗುವ ಭೀತಿಯಲ್ಲಿತ್ತು. ಆದರೆ ಹೈಕೋರ್ಟ್ ಜಾಮೀನು ನೀಡಿದ ಕಾರಣ ಇದೀಗ ವಿನಯ್ ಕುಲಕರ್ಣಿ ಮತ್ತೆ ರಾಜಕೀಯವಾಗಿ ಸಕ್ರಿಯವಾಗಲಿದ್ದು, ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ಸಿಗುವ ಸಾಧ್ಯತೆಯಿದೆ.
ಪ್ರಕರಣದ ಹಿನ್ನೆಲೆ:
೨೦೧೬ರ ಜೂನ್ ೧೫ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು ಧಾರವಾಡದ ಸಪ್ತಾಪುರದಲ್ಲಿರುವ ಅವರ ಜಿಮ್ ಸಮೀಪ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ ರಾಜ್ಯದಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು.


ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಧಾರವಾಡ ಗ್ರಾಮೀಣ ಪೊಲೀಸರು ನಡೆಸಿದರು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಈ ಹತ್ಯೆ ಪೂರ್ವನಿಯೋಜಿತ ಪಿತೂರಿಯ ಭಾಗವಾಗಿದ್ದು, ಆಗಿನ ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಯಿತು.


ಆರೋಪಪಟ್ಟಿ ಸಲ್ಲಿಕೆ:
ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಭಾರತೀಯ ದಂಡ ಸಂಹಿತೆಯ ೧೨೦-ಬಿ (ಅಪರಾಧಿಕ ಸಂಚು), ೧೪೩, ೧೪೭, ೧೪೮ (ಅಕ್ರಮ ಕೂಟ ಮತ್ತು ಗಲಭೆ), ೩೦೨ (ಕೊಲೆ), ೧೦೯ (ಪ್ರಚೋದನೆ), ೨೦೧ (ಸಾಕ್ಷ್ಯನಾಶ), ೧೪೯ (ಸಾಮಾನ್ಯ ಉದ್ದೇಶದಡಿ ಅಪರಾಧ) ಸೇರಿದಂತೆ ಹಲವು ಕಲಂಗಳನ್ನು ಅನ್ವಯಿಸಲಾಗಿತ್ತು. ತನಿಖೆಯ ವೇಳೆ ಸಾಕ್ಷಿಗಳ ಹೇಳಿಕೆಗಳು, ಕರೆ ವಿವರಗಳು, ಹಣಕಾಸುವ್ಯವಹಾರಗಳ ಮಾಹಿತಿ ಹಾಗೂ ಇತರೆ ಸಂದರ್ಭೋಚಿತ ಸಾಕ್ಷ್ಯಗಳನ್ನು ಸಿಬಿಐ ನ್ಯಾಯಾಲಯದ ಮುಂದೆ ಮಂಡಿಸಿತ್ತು.


ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಆಧಾರದ ಮೇಲೆ ವಿನಯ್ ಕುಲಕರ್ಣಿ ಅವರನ್ನು ೨೦೨೦ರ ನವೆಂಬರ್‌ನಲ್ಲಿ ಸಿಬಿಐ ಬಂಧಿಸಿತ್ತು. ಬಳಿಕ ಅವರಿಗೆ ಹಲವು ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಹಾಗೂ ಸಾಕ್ಷಿಗಳೊಂದಿಗೆ ಸಂಪರ್ಕಿಸದಂತೆ ನಿರ್ಬಂಧ ವಿಧಿಸಲಾಗಿತ್ತು.