Home ಮುಖಪುಟ ಸುದ್ದಿ ಪರೀಕ್ಷೆ ಮುಗಿಸಿದ್ದೇವೆ: ಫಲಿತಾಂಶಕ್ಕೆ ಕಾಯುತ್ತಿದ್ದೇವೆ: ಬಿಕೆಎಚ್

ಪರೀಕ್ಷೆ ಮುಗಿಸಿದ್ದೇವೆ: ಫಲಿತಾಂಶಕ್ಕೆ ಕಾಯುತ್ತಿದ್ದೇವೆ: ಬಿಕೆಎಚ್

ಬೆಂಗಳೂರು, ಜು. ೩೧- ಸಂಪುಟ ವಿಸ್ತರಣೆಯ ಪರೀಕ್ಷೆಯನ್ನು ಮುಗಿಸಿದ್ದೇವೆ. ಫಲಿತಾಂಶವನ್ನು ಕಾಯುತ್ತಿದ್ದು, ಅತಿ ಶೀಘ್ರವಾಗಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಂಪುಟ ವಿಸ್ತರಣೆ ಬಗ್ಗೆ ಮಾರ್ಮಿಕವಾಗಿ ಹೇಳಿದರು.


ದೆಹಲಿಯ ಕರ್ನಾಟಕ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತಂತೆ ನಮ್ಮ ವರಿಷ್ಠ ನಾಯಕತ್ವ ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷನಾದ ನನ್ನ ಜತೆ ಚರ್ಚೆ ನಡೆಸಿದೆ. ಚರ್ಚೆಯ ಪರೀಕ್ಷೆ ಮುಗಿದಿದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಶೀಘ್ರ ಫಲಿತಾಂಶ ಪ್ರಕಟವಾಗಲಿದೆ ಎಂದರು.


ಸಂಪುಟ ವಿಸ್ತರಣೆ ಸೋಮವಾರ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಂಚಾಂಗ ಭವಿಷ್ಯವನ್ನೆಲ್ಲಾ ನೋಡಿ ಸಮಯ ನಿರ್ಧಾರ ಮಾಡುತ್ತಾರೆ. ಆಗ ಸಂಪುಟ ವಿಸ್ತರಣೆ ಆಗಲಿದೆ ಎಂದರು.


ಯಶ್‌ಪಾಲ್ ಸುವರ್ಣ ವಿರುದ್ಧ ಕಿಡಿ
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ವಿರುದ್ಧ ಕೆಟ್ಟದ್ದಾಗಿ ಟೀಕೆ ಮಾಡಿರುವ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಶಾಸಕರು ಮಹಾಲಕ್ಷ್ಮಿ ಬ್ಯಾಂಕ್‌ನ ಅಧ್ಯಕ್ಷರಾಗಿ ಏನೆಲ್ಲಾ ಅವ್ಯವಸಾಹ ನಡೆಸಿದ್ದಾರೆ ಎಲ್ಲವೂ ಗೊತ್ತಿದೆ. ಈ ಬಗ್ಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.


ಗಾಂಧಿಯನ್ನು ಕೊಂದ ಗೂಡ್ಸೆ ವಂಶಸ್ಥರು ರಾಹುಲ್‌ಗಾಂಧಿಯನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಜನರಿಗೆ ರಾಜ್ಯದ ಜನರೇ ಉತ್ತರ ಕೊಡುತ್ತಾರೆ. ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್ ನಾಯಕರನ್ನು ಏನೂ ಮಾಡಲು ಆಗಲ್ಲ. ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಇವರುಗಳು ಬಡವರಿಗಾಗಿಯೇ ಬಲಿದಾನ ನೀಡಿದವರು ಎಂದು ಹೇಳಿದರು.