
ಆಳಂದ: ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕನೊಬ್ಬ ಕೆಲಸದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಜಿಡಗಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಪರಶುರಾಮ ಚಂದ್ರಕಾಂತ ದೇವಡೆ (35) ಎಂದು ಗುರುತಿಸಲಾಗಿದೆ.ವಿಬಿ-ಜಿ ರಾಮ ಜಿ ಯೋಜನೆಯಡಿ ಜಿಡಗಾ ಗ್ರಾಮದಲ್ಲಿ ನಡೆಯುತ್ತಿದ್ದ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಪರಶುರಾಮ ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕಾಮಗಾರಿ ವೇಳೆ ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿರುವ ಬೆನ್ನಲ್ಲೇ ಬಿಸಿಲಿನ ತಾಪವೂ ತೀವ್ರಗೊಂಡಿದೆ. ಇದರ ನಡುವೆ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಪರಶುರಾಮ ಸೇರಿದಂತೆ 287 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ಬಿಸಿಲಿನ ತಾಪ ತಾಳಲಾರದೆ ಪರಶುರಾಮ ಕುಸಿದು ಬಿದ್ದಿದ್ದಾರೆ. ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಪಿ.ಡಿ.ಓ ಶರಣಬಸಪ್ಪಾ ಪೂಜಾರಿ ಹಾಗೂ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಪರಶುರಾಮ.
ಪರಶುರಾಮ ಅವರ ತಂದೆ ಚಂದ್ರಕಾಂತ ಅವರು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಾಯಿ, ಅಕ್ಕ, ತಮ್ಮ ಹಾಗೂ ಪತ್ನಿಗೆ ಪರಶುರಾಮ ಅವರೇ ಆಧಾರವಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಅವರ ಪತ್ನಿಗೆ ಹೆರಿಗೆಯಾಗಿದ್ದು, ಪುಟ್ಟ ಮಗುವನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ಪರಶುರಾಮ ಅವರ ನಿಧನದಿಂದ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.























