Home Uncategorized ಸತ್ಯ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ

ಸತ್ಯ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ

ಧಾರವಾಡ, ಜು.೨೦: ಪೊಲೀಸರು ತಮ್ಮ ಕರ್ತವ್ಯವನ್ನು ಶಿಸ್ತು ಬದ್ಧವಾಗಿ ಶ್ರದ್ದೆಯಿಂದ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರು ಸಮವಸ್ತç ಹಾಗೂ ತಾವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಹೊಂದಿರಬೇಕು. ಪೊಲೀಸರು ಸತ್ಯ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ಎಂದು ಬೆಂಗಳೂರಿನ ತರಬೇತಿ ಪೊಲೀಸ್ ಉಪ ಮಹಾನೀರಿಕ್ಷಕರಾದ ಡಿ. ದೇವರಾಜ ಅವರು ಹೇಳಿದರು.


ಅವರು ನಗರದ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಿದ ೨೪ನೇ ತಂಡದ ಸಶಸ್ತç ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿ ತಂಡಗಳ ಪಥಸಂಚಲನ ವೀಕ್ಷಣೆ ಮಾಡಿ, ಮಾತನಾಡಿದರು.


ಕ್ರಿಮಿನಲ್‌ಗಳ ಜೊತೆ ಪೊಲೀಸ್ ಒಡನಾಟವು ವೈಯಕ್ತಿಕವಾಗಿ ಇರಬಾರದು. ಕೈದಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ, ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಅಥವಾ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದೊಯ್ಯುವ ಮತ್ತು ಮರಳಿ ಕರೆತರುವ ಜವಾಬ್ದಾರಿಯನ್ನು ಮಾತ್ರ ನಿರ್ವಹಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಸಂಭಾಷಣೆ ಮಾಡಬಾರದು ಎಂದು ಅವರು ಹೇಳಿದರು.


ನಾನು ಪೊಲೀಸ್ ಎಂಬ ಹೆಮ್ಮೆ ಇರಬೇಕೇ ಹೊರತು ದುರಹಂಕಾರ ಇರಬಾರದು. ಪೊಲೀಸ್ ಸಮವಸ್ತçಕ್ಕೆ ಮತ್ತು ಪೊಲೀಸ್ ಇಲಾಖೆಗೆ ಚ್ಯುತಿ ಬಾರದ ಹಾಗೆ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಪಥ ಸಂಚಲನದ ಪ್ರಧಾನ ದಂಡ ನಾಯಕರಾಗಿ ಧಾರವಾಡ ಡಿಎಆರ್ ನ ಉಪ ಪೊಲೀಸ್ ಅಧೀಕ್ಷಕ ಮತ್ತು ಉಪ ಪ್ರಾಂಶುಪಾಲರಾದ ಡಿ.ಎಸ್.ಧನಗರ ಹಾಗೂ ಉಪ ದಂಡನಾಯಕರಾಗಿ ಡಿಎಆರ್ ನ ಆರ್.ಪಿ.ಐ ಫಕ್ಕಿರಪ್ಪ ಆರ್. ಡೊಕ್ಕಣವರ ಅವರ ನೇತೃತ್ವದಲ್ಲಿ ೪ ತಂಡಗಳು ಪಥಸಂಚಲವನ್ನು ಪ್ರದರ್ಶಿಸಿದರು.


ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರತಿಜ್ಞಾವಿಧಿ ಬೋಧಿಸಿ ಮತ್ತು ತರಬೇತಿ ಶಾಲೆಯ ಬಗ್ಗೆ ವರದಿ ವಾಚನ ನೀಡಿದರು.


ಧಾರವಾಡ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಇದೂವರೆಗೆ ಒಟ್ಟು ೪,೧೨೯ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಈ ವರ್ಷದ ೨೪ ನೇ ತಂಡದಲ್ಲಿ ೧೦೦ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಹೇಳಿದರು.


ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿಯಲ್ಲಿ ಒಳಾಂಗಣ ವಿಷಯದಲ್ಲಿ ಪ್ರಥಮ ಬಹುಮಾನ ಪಾರೀಶನಾಥ ಮುತ್ತೂರ, ದ್ವಿತೀಯ ಬಹುಮಾನ ಶಿವಾನಂದ ಕರೂರ, ತೃತೀಯ ಬಹುಮಾನ ನರಸಿಂಹ ಸೇವು ಹಾಗೂ ಹೊರಾಂಗಣ ವಿಷಯದಲ್ಲಿ ಪ್ರಥಮ ಬಹುಮಾನ ಕರಿಯಪ್ಪ ಲಕ್ಕುಂಡಿ, ದ್ವಿತೀಯ ಬಹುಮಾನ ಕಿರಣ ಕುಮಾರ ಜಿ., ತೃತೀಯ ಬಹುಮಾನ ಪ್ರಮೋಧ ಕೆ.ಎಸ್ ಅವರಿಗೆ ಬಹುಮಾನ ವಿತರಿಸಲಾಯಿತು.


ಫೈರಿಂಗ್ ವಿಷಯದಲ್ಲಿ ಪ್ರಥಮ ಬಹುಮಾನ ಮಂಜುನಾಥ ತಲ್ಲೂರ, ದ್ವಿತೀಯ ಬಹುಮಾನ ರೇಣುರೆಡ್ಡಿ ಬಾಡಗಿ, ತೃತೀಯ ಬಹುಮಾನ ವಿಠ್ಠಲ್ ಹೊನ್ನಿಕೊಳ್ಳ ಮತ್ತು ವಿಶೇಷ ಬಹುಮಾನ ಸರ್ವೋತ್ತಮ ಪ್ರಶಸ್ತಿ ಪಡೆದ ಪ್ರಶಿಕ್ಷಣಾರ್ಥಿ (ಆಲ್ ರೌಂಡ್ ಬೆಸ್ಟ್ ಟ್ರೇನಿ) ಪರೀಶನಾಥ ಮುತ್ತೂರ ಅವರಿಗೆ ಬಹುಮಾನ ವಿತರಿಸಿದರು.


ಕಾರ್ಯಕ್ರಮದಲ್ಲಿ ಧಾರವಾಡ ಪೊಲೀಸ್ ಉಪ ಅಧೀಕ್ಷಕ ಶಿವಾನಂದ ಕಟಗಿ ಅವರು ಸ್ವಾಗತಿಸಿದರು, ಧಾರವಾಡ ಗ್ರಾಮೀಣ ಪೊಲೀಸ್ ಉಪ ಅಧಿಕ್ಷಕ ವಿನೋದ ಮುಕ್ತೆದಾರ ಅವರು ವಂದಿಸಿದರು.


ವೇದಿಕೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತೆ ಶೃತಿ. ಎನ್.ಎಸ್., ಕಲಘಟಗಿ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರಾದ ಎಮ್.ಎಮ್.ಯಾದವಾಡ, ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರಾದ ಸತೀಶ್ ಚಿಟಗುಪ್ಪಿ ಅವರು ಇದ್ದರು.


ಕಾರ್ಯಕ್ರಮದಲ್ಲಿ ಧಾರವಾಡ ಪಿ.ಎಸ್.ಐ ನೀತು ಗುಡೆ, ಎ.ಆರ್.ಎಸ್.ಐ ವೈ.ಎಮ್.ದೊಡಮನಿ, ಎ.ಆರ್.ಎಸ್.ಐ ಅರ್ಜುನ ಜಿಲ್ಲೆನವರ, ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು. ನಿವೃತ್ತಿ ಹಿರಿಯ ಅಧಿಕಾರಿಗಳು, ಪ್ರಶಿಕ್ಷಣಾರ್ಥಿ ಕುಟುಂಬದವರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.