
ಬೆಂಗಳೂರು,ಜೂ.೧೩- “ನಾವೆಲ್ಲರೂ ಜನಸೇವೆ ಮಾಡಲು ಬಂದವರಾಗಿದ್ದು, ಆ ಖಾತೆ, ಈ ಖಾತೆ ಎಂಬ ಭೇದಭಾವ ನಮ್ಮಲ್ಲಿಲ್ಲ. ನೀಡಲಾದ ಜವಾಬ್ದಾರಿಯನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುವುದಷ್ಟೇ ನಮ್ಮ ಬದ್ಧತೆ” ಎಂದು ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತು ಎದ್ದಿರುವ ಕೆಲವರ ಅಸಮಾಧಾನದ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
ಕೆಲ ಸಚಿವರಿಗೆ ಖಾತೆ ಬದಲಾವಣೆ ಕುರಿತು ಉಂಟಾಗಿದ್ದ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, “ಈಗಾಗಲೇ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿಯವರು ತಮ್ಮ ಇಲಾಖೆಯ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಕೆಲಸವನ್ನೂ ಆರಂಭಿಸಿದ್ದಾರೆ. ಸಂಪುಟದ ಎಲ್ಲಾ ಸಚಿವರು ತಮಗೆ ವಹಿಸಲಾದ ಖಾತೆಗಳ ಜವಾಬ್ದಾರಿಯನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ” ಎಂದರು.
ತಮ್ಮ ಖಾತೆಯ ಬಗ್ಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಕಳೆದ ಅವಧಿಯಲ್ಲಿ ಅರಣ್ಯ ಇಲಾಖೆಯಲ್ಲಿ ಅತ್ಯಂತ ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ. ಈಗ ನೀಡಿರುವ ಖಾತೆಯನ್ನೂ ಅಷ್ಟೇ ಜವಾಬ್ದಾರಿಯಿಂದ ಮತ್ತು ಚೆನ್ನಾಗಿ ನಿಭಾಯಿಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಎದುರಾಗಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯಗಳಿಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಸುವ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಆದರೆ ಕೇಂದ್ರ ಸರ್ಕಾರವು ಸದ್ಯ ಕೇವಲ ಶೇ. ೩೦ ರಷ್ಟು ಮಾತ್ರ ರಸಗೊಬ್ಬರವನ್ನು ಪೂರೈಕೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರತೆ ಸೃಷ್ಟಿಯಾಗಿದೆ” ಎಂದು ಆರೋಪಿಸಿದರು.
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ತಕ್ಷಣವೇ ರಾಜ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಅಲ್ಲದೆ, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರಸಗೊಬ್ಬರ ಲಭ್ಯತೆ ಮತ್ತು ಕೊರತೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಇದೇ ವೇಳೆ ತಿಳಿಸಿದರು.




























