Home ಜಿಲ್ಲೆ ಕಲಬುರಗಿ ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

ಕಲಬುರಗಿ,ಜೂ.13-ದರೋಡೆಗೆ ಹೊಂಚು ಹಾಕಿದ ಮತ್ತು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮಾಡುವ ಪ್ರಕರಣದಲ್ಲಿ ಭಾಗಿಯಾಗಿ ಸುಮಾರು 8 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
2010ರಲ್ಲಿ ಹಲಕರ್ಟಿ ಸೀಮಾಂತರದ ವಾಡಿ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ದರೋಡೆ ಮಾಡಲು ಹೊಂಚು ಹಾಕಿದ ಪ್ರಕರಣದಲ್ಲಿ ಭಾಗಿಯಾದ ಚಿತ್ತಾಪೂರ ತಾಲ್ಲೂಕಿನ ಕಡಬೂರ ಗ್ರಾಮದ ಅಹ್ಮದ್ ಷಾ ತಂದೆ ಮಹಿಬೂಬ್ ಷಾ (43) ಎಂಬಾತನನ್ನು ಬೆಂಗಳೂರಿನಲ್ಲಿ ಮತ್ತು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮಾಡುವ ಪ್ರಕರಣದಲ್ಲಿ ಭಾಗಿಯಾಗಿ ಸುಮಾರು 8 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಚಿತ್ತಾಪುರ ತಾಲ್ಲೂಕಿನ ನಾಲವಾರ ಸ್ಟೇಷನ್‍ನ ನಿಂಗಪ್ಪ ತಂದೆ ಚೌಡಪ್ಪ (36) ಎಂಬಾತನನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದರೋಡೆಗೆ ಹೊಂಚು ಹಾಕಿದ ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಗೆ ಸಂಬಂಧಿಸಿದಂತೆ ಈ ಇಬ್ಬರು ಆರೋಪಿಗಳ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಎಸ್.ಸಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ವಾಡಿ ಪಿಎಸ್‍ಐಗಳಾದ ತಿರುಮಲೇಶ, ರೇಣುಕಾ, ಎಎಸ್‍ಐ ಮೊಹ್ಮದ್ ಯೂಸೂಫ್, ಸಿಬ್ಬಂದಿಗಳಾದ ಸುರೇಶ, ಬಸಲಿಂಗಪ್ಪ, ಸಂಗಮೇಶ, ಮಾಪಣ್ಣ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಬೆಂಗಳೂರು, ಯಾದಗಿರಿ, ಕಲಬುರಗಿ, ನಾಲವಾರ, ಕುಂಬಾರಹಳ್ಳಿ, ಸನ್ನತಿ, ವಾಡಿ ಪಟ್ಟಣ ಮುಂತಾದ ಕಡೆಗಳಲ್ಲಿ ತನಿಖೆ ನಡೆಸಿ ಕೊನೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳ ತಂಡದ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.