Home ಮುಖಪುಟ ಸುದ್ದಿ ಖಾತೆ ವಿಚಾರ ಸಿಎಂ ತೀರ್ಮಾನಿಸುತ್ತಾರೆ

ಖಾತೆ ವಿಚಾರ ಸಿಎಂ ತೀರ್ಮಾನಿಸುತ್ತಾರೆ

ಬೆಂಗಳೂರು.ಜೂ೧೩: ರಾಜಧಾನಿಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಖಾತೆ ಹಂಚಿಕೆ ವಿಚಾರದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಮಗಿರುವ ಕೆಲವು ಆಕ್ಷೇಪ ಹಾಗೂ ನಿರೀಕ್ಷೆಗಳನ್ನು ಬಹಿರಂಗಪಡಿಸಿದ್ದು, ಈ ವಿವಾದವೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಜಿಬಿಎ ಖಾತೆಯ ಜವಾಬ್ದಾರಿ ವಹಿಸುವ ಮುನ್ನ ಸಂಪೂರ್ಣ ಅಧಿಕಾರ ಮತ್ತು

ಸ್ಪಷ್ಟತೆ ಇರಬೇಕು ಎಂದು ಪ್ರತಿಪಾದಿಸಿರುವ ಸಚಿವರು, ಸಿಎಂ ಭರವಸೆಯ ಬೆನ್ನಲ್ಲೇ ತಮ್ಮ ಮುಂದಿನ ನಡೆ ಇರಿಸಲಿದ್ದಾರೆ ಎನ್ನಲಾಗಿದೆ.


ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ತಮಗೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸುತ್ತಲೇ, ಖಾತೆ ನಿರ್ವಹಣೆಯಲ್ಲಾಗುತ್ತಿರುವ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.”ಮುಖ್ಯಮಂತ್ರಿಗಳು ಹಾಗೂ ಪಕ್ಷ ಅತ್ಯಂತ ಕಠಿಣವಾದ ಮತ್ತು ಜವಾಬ್ದಾರಿಯುತವಾದ ಕೆಲಸವನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂಬುದು ಇವತ್ತಿನ ದಿನಗಳಲ್ಲಿ ದೊಡ್ಡ ಸವಾಲು. ಬೆಂಗಳೂರಿನ ಜನರ ಹಾಗೂ ಪಕ್ಷದ ನಿರೀಕ್ಷೆಗಳು ಗಗನಚುಂಬಿಯಾಗಿವೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವಾಗ ನಮಗೆ ಸಂಪೂರ್ಣ ಸ್ಪಷ್ಟತೆ ಇರಬೇಕು. ಕೇವಲ ಖಾತೆ ಪಡೆದರೆ ಸಾಲದು, ಅದರಲ್ಲಿ ಅಕೌಂಟಬಿಲಿಟಿ (ಹೊಣೆಗಾರಿಕೆ) ಇರಬೇಕು. ನಾವು ನೀಡುವ ಕೆಲಸ ಫಲಿತಾಂಶದ ರೂಪದಲ್ಲಿ ಕಾಣಿಸಬೇಕು ಎಂದರೆ ಅಧಿಕಾರ ಮತ್ತು ಜವಾಬ್ದಾರಿಯ ಹಂಚಿಕೆ ಸ್ಪಷ್ಟವಾಗಿರಬೇಕು” ಎಂದು ಸಚಿವರು ಮಾರ್ಮಿಕವಾಗಿ ನುಡಿದರು.


ಜಿಬಿಎ ಖಾತೆಯ ವ್ಯಾಪ್ತಿಯಿಂದ ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳನ್ನು ಹೊರಗಿಟ್ಟಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮಿಂದ ಜನರು ಮತ್ತು ಹೈಕಮಾಂಡ್ ಫಲಿತಾಂಶವನ್ನು ನಿರೀಕ್ಷಿಸುತ್ತಾರೆ. ಸಂಪೂರ್ಣ ಜವಾಬ್ದಾರಿ ಮತ್ತು ಮುಕ್ತ ಅಧಿಕಾರ ಇದ್ದರೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಅರ್ಧಂಬರ್ಧ ಜವಾಬ್ದಾರಿಯಿಂದ ಉತ್ತಮ ಫಲಿತಾಂಶ ಬರಲು ಸಾಧ್ಯವಿಲ್ಲ” ಎಂದು ನೇರವಾಗಿ ಅಸಮಾಧಾನ ಹೊರಹಾಕಿದರು.


ಈಗಾಗಲೇ ದೆಹಲಿಯಲ್ಲಿ ಮುಖ್ಯಮಂತ್ರಿಗಳ ಜೊತೆ ನಡೆದ ಕೆಲವು ಪ್ರಮುಖ ಸಭೆಗಳಲ್ಲೂ ಭಾಗಿಯಾಗಿರುವುದನ್ನು ನೆನಪಿಸಿದ ಅವರು, ಈ ಎಲ್ಲ ಗೊಂದಲಗಳ ಕುರಿತು ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.


ಸಚಿವರ ಈ ಆಕ್ಷೇಪಗಳಿಗೆ ಮುಖ್ಯಮಂತ್ರಿಗಳು ಧನಾತ್ಮಕವಾಗಿ ಸ್ಪಂದಿಸಿದ್ದು, ಇಡೀ ಪ್ರಸಂಗವನ್ನು ಶೀಘ್ರದಲ್ಲೇ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. “ನನ್ನ ನಿಲುವನ್ನು ಸಿಎಂ ಅವರಿಗೆ ವಿವರಿಸಿದ್ದೇನೆ. ಅವರು ಇನ್ನೆರಡು ದಿನಗಳಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದರು.


ಖಾತೆ ಹಂಚಿಕೆಯ ಗೊಂದಲಗಳು ಮತ್ತು ಅಧಿಕಾರದ ವ್ಯಾಪ್ತಿಯನ್ನು “ಸರಿಪಡಿಸುವವರೆಗೂ ನೀವು ಖಾತೆಯನ್ನು ವಹಿಸಿಕೊಳ್ಳುವುದಿಲ್ಲವೇ?” ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ನೇರ ಪ್ರಶ್ನೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಯಾವುದೇ ಮರುಉತ್ತರ ನೀಡದೆ, ಮೌನವಾಗಿ ಸಭೆಯಿಂದ ಹೊರನಡೆದರು. ಸಚಿವರ ಈ ಮೌನವು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಸಿಎಂ ತೆಗೆದುಕೊಳ್ಳುವ ಮುಂದಿನ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.