Home ಮುಖಪುಟ ಸುದ್ದಿ ಸಂಪುಟದಲ್ಲಿ ಎಸ್ಟಿ ಪಂಗಡಕ್ಕೆ ಹೆಚ್ಚಿನ ಆದ್ಯತೆ ಅಗತ್ಯ

ಸಂಪುಟದಲ್ಲಿ ಎಸ್ಟಿ ಪಂಗಡಕ್ಕೆ ಹೆಚ್ಚಿನ ಆದ್ಯತೆ ಅಗತ್ಯ

ಬೆಂಗಳೂರು,ಜೂ೧೩: ಎಸ್‌ಟಿ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಮತ್ತಷ್ಟು ಪ್ರಾತಿನಿಧ್ಯ ನೀಡಬೇಕು ಹಾಗೂ ಮೀಸಲಾತಿ ಸೇರಿದಂತೆ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಮತ್ತೂ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಹಿಂದೆ ಎಸ್‌ಟಿ ಸಮುದಾಯದ ಮೂವರು ಸಚಿವರಿದ್ದರು. ಅದೇ ರೀತಿ ಈಗಲೂ ಮೂರು ಸಚಿವ ಸ್ಥಾನಗಳನ್ನು ನೀಡಬೇಕು. ಇದೇನೂ ನಮ್ಮ ಹೆಚ್ಚುವರಿ ಬೇಡಿಕೆಯಲ್ಲ, ಹಳೆಯ ಪ್ರಾತಿನಿಧ್ಯದ ಮುಂದುವರಿಕೆಯಷ್ಟೇ. ಇದರೊಂದಿಗೆ ವಿಶ್ವವಿದ್ಯಾಲಯಗಳಲ್ಲಿ ಎಸ್‌ಟಿ ಸಮುದಾಯದ ಉಪಕುಲಪತಿಗಳ (ವಿಸಿ) ನೇಮಕವಾಗಿಲ್ಲ. ತಕ್ಷಣವೇ ನಮ್ಮ ಸಮುದಾಯದ ವಿಸಿಗಳನ್ನು ನೇಮಕ ಮಾಡಬೇಕು,” ಎಂದು ಜಾರಕಿಹೊಳಿ ಒತ್ತಾಯಿಸಿದರು.

“ಎರಡು ಮೂರು ಸಮುದಾಯಗಳ ಮೀಸಲಾತಿ ವಿಷಯ ಸದ್ಯ ಚರ್ಚೆಯಲ್ಲಿದೆ. ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕಿದೆ. ಇದಕ್ಕಾಗಿ ಸರ್ಕಾರ ಹಿರಿಯ ವಕೀಲರನ್ನು ನೇಮಕ ಮಾಡಬೇಕು. ಕೋರ್ಟ್ ಮುಖಾಂತರವೇ ಮೀಸಲಾತಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬೇಕಿದೆ. ಈ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಎಸ್‌ಟಿ ಸಮುದಾಯದ ಶಾಸಕರ ನಿಯೋಗದೊಂದಿಗೆ ಶೀಘ್ರದಲ್ಲೇ ಸಿಎಂ ಅವರನ್ನು ಭೇಟಿ ಮಾಡಲಿದ್ದೇವೆ.”ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಸಭೆಯನ್ನು ಕೇವಲ ಶಾಸಕರಿಗೆ ತರಬೇತಿ ನೀಡಲು ಕರೆಯಲಾಗಿದೆ. ಮತದಾನ ಮಾಡುವಾಗ ಶಾಸಕರಿಂದ ಯಾವುದೇ ತಪ್ಪುಗಳಾಗಬಾರದು. ಅದಕ್ಕಾಗಿ ಸರಿಯಾಗಿ ಪ್ರ್ಯಾಕ್ಟೀಸ್ ಮಾಡಬೇಕಾಗುತ್ತದೆ. ಎರಡು-ಮೂರು ಮತಗಳು ತಪ್ಪಾದರೂ ಅಭ್ಯರ್ಥಿ ಔಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷತೆ ಮತ್ತು ಸ್ಟ್ರಾಟಜಿ (ತಂತ್ರಗಾರಿಕೆ) ರೂಪಿಸಲು ಶಾಸಕರನ್ನು ಕರೆದುಕೊಂಡು ಹೋಗಲಾಗುತ್ತಿದೆ. ನಮ್ಮಲ್ಲಿ ಗರಿಷ್ಠ ಮತಗಳಿರುವುದರಿಂದ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ, ಯಾವುದೇ ಸಮಸ್ಯೆ ಇಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಸಭೆಯ ಕುರಿತು ಮಾತನಾಡಿದ ಅವರು, “ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ. ಪ್ರಾದೇಶಿಕವಾಗಿ ವಿಭಿನ್ನ ಬೇಡಿಕೆಗಳಿದ್ದು, ನಾನು ಕೂಡ ಡಿಸಿಗಳ ಮೀಟಿಂಗ್‌ನಲ್ಲಿ ಭಾಗವಹಿಸಲಿದ್ದೇನೆ,” ಎಂದರು.


ಇದೇ ವೇಳೆ ನೀತಿ ಆಯೋಗದ ಸಭೆಯ ಬಗ್ಗೆ ಪ್ರತಿಕ್ರಿಯಿಸಿ, “ಹಿಂದೆಲ್ಲ ಸಚಿವ ಕೃಷ್ಣ ಬೈರೇಗೌಡ ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೇರವಾಗಿ ಭಾಗವಹಿಸಿದ್ದಾರೆ. ಇದರಿಂದಾಗಿ ರಾಜ್ಯದ ಹೆಚ್ಚಿನ ವಿಷಯಗಳನ್ನು ಮತ್ತು ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದೆ ಸಮರ್ಥವಾಗಿ ಚರ್ಚಿಸಲು ಅನುಕೂಲವಾಗುತ್ತದೆ,” ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.