
ಕಲಬುರಗಿ,ಜೂ.13-ನಗರದ ಎಸ್‍ಪಿ ಕಚೇರಿ ರಸ್ತೆಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮೇಲ್ಛಾವಣಿಯ ಸಿಮೆಂಟ್ ಪದರು ಕುಸಿದು ಐವರು ವಿದ್ಯಾರ್ಥಿನಿಯರಿಗೆ ಗಾಯವಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ನಿತ್ಯದಂತೆ ಬೆಳಿಗ್ಗೆ ತರಗತಿ ಶುರುವಾಗಿತ್ತು. ಹೊಸ ಕಟ್ಟಡದ ಮೂರನೇ ಮಹಡಿಯ ಪ್ರಥಮ ಪಿಯು ಕಾಮರ್ಸ್ ತರಗತಿಯಲ್ಲಿ ವಿದ್ಯಾರ್ಥಿನಿಯರು ಶಾಂತವಾಗಿ ಉಪನ್ಯಾಸಕರ ಪಾಠ ಕೇಳುತ್ತಿದ್ದ ವೇಳೆ ಒಮ್ಮಿಂದೊಮ್ಮೆಲೆ ಮೇಲ್ಛಾವಣಿ ಕುಸಿದಿದೆ. ಈ ವೇಳೆ ಸೃಷ್ಟಿ, ಸ್ನೇಹಾ, ಶೀತಲ್, ಪೂಜಾ ಹಾಗೂ ದಿವ್ಯಾ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಟ್ರಾಮಾ ಕೇರ್‍ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರಿಗೆ ಹೆಚ್ಚಿನ ಗಾಯವಾದ ಪ್ರಯುಕ್ತ ಐಸಿಯುನಲ್ಲಿ ಭರ್ತಿ ಮಾಡಲಾಗಿದೆ.
ಕಾಲೇಜಿನಲ್ಲಿ ಮೇಲ್ಛಾವಣಿ ಪದರು ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡ ವಿಷಯ ತಿಳಿದು ಶಾಸಕ ಅಲ್ಲಮಪ್ರಭು ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಟ್ರಾಮಾ ಕೇರ್‍ಗೆ ತೆರಳಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಎಡಿಸಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ ಆಲದಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಲ್ಛಾವಣಿ ಪದರು ಕುಸಿದು ಗಾಯಗೊಂಡ ವಿದ್ಯಾರ್ಥಿನಿಯರು ದಾಖಲಾಗಿರುವ ಟ್ರಾಮಾ ಸೆಂಟರ್‍ಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಜಿ.ಪಂ.ಸಿಇಓ ರಾಹುಲ್ ಸಂಕನೂರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

























