
ಮೈಸೂರು.ಆ.೨೧ – ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದ ಭರ್ತಿಯಾಗಿದ್ದ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಇದೀಗ ಭಾರೀ ಕುಸಿತ ಕಂಡುಬಂದಿದೆ.
ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಭಾರೀ ಕುಸಿತ ಕಂಡಿದ್ದು,ಜಲಾಶಯದ ನೀರಿನ ಮಟ್ಟ ೭ ಅಡಿಗಳಷ್ಟು ಇಳಿಕೆಯಾಗಿದೆ.
ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಜಲಾಶಯದಲ್ಲಿ ಕಳೆದ ೯ ದಿನಗಳ ಅಂತರದಲ್ಲಿ ಬರೋಬ್ಬರಿ ೪ ಟಿಎಂಸಿ ನೀರು ಖಾಲಿಯಾಗಿದ್ದು, ಕಳೆದ ಆಗಸ್ಟ್ ೧೩ರಂದು ಗರಿಷ್ಠ ಮಟ್ಟವಾದ ೨,೨೮೨ ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ, ಭಾರೀ ಪ್ರಮಾಣದ ಹೊರಹರಿವಿನಿಂದಾಗಿ ಇಂದು ೨,೨೭೫ ಅಡಿಗೆ ಕುಸಿದಿದೆ. ೧೯.೫೨ ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ ೧೪.೫೭ ಟಿಎಂಸಿ ನೀರಿದೆ. ಕಳೆದ ೯ ದಿನಗಳಲ್ಲಿ ೪.೯೫ ಟಿಎಂಸಿ ನೀರು ಹರಿದು ಹೋಗಿದೆ.
ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನಿರಂತರವಾಗಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ.


































