Home ಮುಖಪುಟ ಸುದ್ದಿ ನಾಗೇಂದ್ರ ರಾಜೀನಾಮೆ : ನಿಲ್ಲದ ಪ್ರತಿಪಕ್ಷಗಳ ಹೋರಾಟ

ನಾಗೇಂದ್ರ ರಾಜೀನಾಮೆ : ನಿಲ್ಲದ ಪ್ರತಿಪಕ್ಷಗಳ ಹೋರಾಟ

೫ನೇ ದಿನವೂ ಸದನದಲ್ಲಿ ಗದ್ದಲ

ಬೆಂಗಳೂರು, ಆ. ೨೧- ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ರವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಹೋರಾಟ ೫ನೇ ದಿನವಾದ ಇಂದು ಸಹ ಮುಂದುವರೆದಿದ್ದು, ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ರೂಪುಗೊಂಡು ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.


ಇಂದು ಸದನ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸಚಿವ ಬಿ. ನಾಗೇಂದ್ರರವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗ ತೊಡಗಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.


ಈ ಗದ್ದಲದಲ್ಲಿಯೇ ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ರವರು ಪ್ರಶ್ನೋತ್ತರ ಕಲಾಪವನ್ನು ನಡೆಸಿ ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಸದನದಲ್ಲಿ ಉತ್ತರಗಳನ್ನು ಮಂಡಿಸಿದರು.


ಈ ಹಂತದಲ್ಲೂ ಪ್ರತಿಪಕ್ಷಗಳು ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು.


ನಂತರ ಸಭಾಧ್ಯಕ್ಷರು ಗದ್ದಲದಲ್ಲಿಯೇ ವಿಧೇಯಕ ಪರ್ಯಾಲೋಚನೆ ಅಂಗೀಕಾರ ಕಲಾಪವನ್ನು ಕೈಗೆತ್ತಿಕೊಂಡರು.


ವಿಪಕ್ಷಗಳ ಘೋಷಣೆ, ಗದ್ದಲದ ನಡುವೆಯೇ ಜಿಬಿಎ ಸಚಿವ ಕೃಷ್ಣಬೈರೇಗೌಡ ಅವರು ೨೦೨೬ನೇ ಸಾಲಿನ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರಿದ್ದು, ಸದನದ ಈ ವಿಧೇಯಕಕ್ಕೆ ಧ್ವನಿ ಮತದಿಂದ ಅಂಗೀಕಾರ ನೀಡಿತು.
ಸಚಿವ ಯತೀಂದ್ರ ಸಿದ್ದರಾಮಯ್ಯನವರ ಪರವಾಗಿ ಜಿಬಿಎ ಸಚಿವ ಕೃಷ್ಣಬೈರೇಗೌಡ ಅವರು ೨೦೨೬ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅದಕ್ಕೂ ಸದನ ಒಪ್ಪಿಗೆ ನೀಡಿದರು.


ಪೌರಾಡಳಿತ ಸಚಿವರಾದ ಹೆಚ್.ಸಿ. ಬಾಲಕೃಷ್ಣ ಅವರು ೨೦೨೬ನೇ ಸಾಲಿನ ಕರ್ನಾಟಕ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಅದಕ್ಕೆ ಅಂಗೀಕಾರ ಪಡೆದರು.


ಈ ಕಲಾಪದಲ್ಲಿ ಇಷ್ಟೆಲ್ಲಾ ವಿಧೇಯಕಗಳ ಅಂಗೀಕಾರವಾಗುತ್ತಿದ್ದರೂ ವಿಪಕ್ಷಗಳು ನಿರಂತರವಾಗಿ ಸರ್ಕಾರದ ವಿರುದ್ಧ, ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗುತ್ತಲೇ ಇದ್ದರು. ಆಗ ಸಭಾಧ್ಯಕ್ಷ ಸದನವನ್ನು ಸೋಮವಾರಕ್ಕೆ ಮುಂದೂಡಿದರು.

ಮೇಲ್ಮನೆಯಲ್ಲೂ ಪ್ರತಿಭಟನೆ


ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಪರಿಷತ್ ನಲ್ಲಿ ಐದನೇ ದಿನವು ಪ್ರತಿಪಕ್ಷ ಬಿಜೆಪಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.


ಕಲಾಪ ಆರಂಭವಾಗುತ್ತಿದ್ದಂತೆ ಕಳಂಕಿತ ಸಚಿವ ನಾಗೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಘೋಷಣೆ ದಿಕ್ಕಾರಗಳನ್ನು ಕೂಗತೊಡಗಿದರು.


ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಸಲೀಂ ಅಹಮದ್ ಅವರು ರಾಜ್ಯದ ಹಿತದೃಷ್ಟಿಯಿಂದ ಜ್ವಲಂತ ವಿಷಯಗಳ ಚರ್ಚೆ ನಡೆಸಲು ಪ್ರತಿಪಕ್ಷಗಳು ಹಠ ಬಿಟ್ಟು ಪ್ರತಿಭಟನೆ ಹಿಂತೆಗೆದುಕೊಂಡು ಪ್ರಶ್ನೋತ್ತರ ಶೂನ್ಯವೇಳೆ ಇನ್ನಿತರ ಕಾರ್ಯಕಲಾಪಗಳು ನಡೆಯಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.


ಕಳೆದ ಐದು ದಿನಗಳಿಂದ ಪ್ರತಿಪಕ್ಷಗಳ ಪ್ರತಿಭಟನೆಯಿಂದ ಸುಗಮವಾಗಿ ಕಲಾಪವನ್ನು ನಡೆಸಲಾಗುತ್ತಿಲ್ಲ ತಮ್ಮಲ್ಲಿ ಪರಿಪರಿಯಾಗಿ ಬೇಡಿಕೊಳ್ಳುವೆ,ಬೇರೆ ಬೇರೆ ವಿಶ್ಲೇಷಣೆಗಳು ನಡೆಯುತ್ತಿವೆ ರಾಜ್ಯದಲ್ಲಿ ಬರ ಇನ್ನಿತರ ಹಲವು ಸಮಸ್ಯೆಗಳಿವೆ ಅದರ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.


ಸುಗಮವಾಗಿ ಸದನವನ್ನು ನಡೆಸಲು ತಮ್ಮಲ್ಲಿ ಮತ್ತೆ ಮನವಿ ಮಾಡುತ್ತೇನೆ,ಆದರೆ ನಿಮ್ಮ ಹಠಮಾರಿ ಧೋರಣೆಯಿಂದ ಸದನ ನಡೆಸಲಾಗುತ್ತಿಲ್ಲ ಎಂದು ಹೇಳಿದರು.
ಪ್ರಶ್ನೋತ್ತರ ಇನ್ನಿತರ ಕಲಾಪಗಳಿಗೆ ಅವಕಾಶ ಕೊಡಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಸಂಬಂಧಪಟ್ಟ ಸಚಿವರಿದ್ದಾರೆ ಎಂದು ವಿನಂತಿಸದರಾದರೂ ಪ್ರತಿಪಕ್ಷಗಳ ಸದಸ್ಯರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು.


ಪ್ರತಿಭಟನೆ ನಡುವೆ ಸಭಾಪತಿ ಸಲೀಂ ಅಹಮದ್ ಅವರು ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.
ಪ್ರತಿಭಟನೆಯ ನಡುವೆ ಪ್ರಶ್ನೋತ್ತರ ಶೂನ್ಯವೇಳೆ ವರದಿ ಒಪ್ಪಿಸುವುದು ಗಮನ ಸೆಳೆಯುವ ಸೂಚನೆಗಳ ಬಳಿಕ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.