
ವಾಡಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಸತತ ಮೂರನೇ ವರ್ಷವೂ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಮಂಗಳವಾರ ನಗರದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಾಡಿ ಡಿಬಿಆರ್‌ಎಸ್ ತಂಡವು ಎಲ್ಲಾ ಎದುರಾಳಿ ತಂಡಗಳನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೈಹಿಕ ಶಿಕ್ಷಕ ಶ್ರೀನಾಥ ಇರಗೊಂಡ ಅವರ ಕಠಿಣ ತರಬೇತಿ ಹಾಗೂ ಮಕ್ಕಳ ನಿರಂತರ ಪರಿಶ್ರಮದಿಂದ ಯಶಸ್ಸು ದಕ್ಕಿದೆ.
ಮೊದಲು ನಾಲವಾರ ಹೋಬಳಿ ಮಟ್ಟದಲ್ಲಿ ಪ್ರಥಮ, ನಂತರ ಚಿತ್ತಾಪುರ ತಾಲೂಕು ಮಟ್ಟದಲ್ಲಿ ಪ್ರಥಮ, ಈಗ ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದರು,ವಾಲಿ ಬಾಲ್ ಕ್ರೀಡೆಯಲ್ಲಿ ಅಜೇಯ ತಂಡ ವಾಗಿ ಮುನ್ನುಗ್ಗುತ್ತಿರುವುದು ವಿಶೇಷ ಮೈದಾನದಲ್ಲಿ ವಿದ್ಯಾರ್ಥಿಗಳು ಚೆಂಡಿ ನಂತೆ ಪುಟಿಯುವ ಚುರುಕುತನ, ಸರ್ವಿಸ್, ಸ್ಟಾಶಿಂಗ್ ಹಾಗೂ ಬ್ಲಾಕಿಂಗ್ ನಲ್ಲಿ ತೋರಿದ ಕೌಶಲ್ಯ ನೆರೆದಿದ್ದ ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ನೇರ ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಪದಕಗಳನ್ನು ಅಪ್ಪಿಕೊಂಡರು.
ಈ ಗೆಲುವಿನೊಂದಿಗೆ ವಾಡಿ ಡಿಬಿ ಆರ್‌ಎಸ್ ತಂಡವು ಮುಂದಿನ ತಿಂಗಳು ನಡೆಯಲಿರುವ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದೆ. ಶಾಲೆಯ ಪ್ರಾಂಶುಪಾಲ ಉದಯ ಧರೆಣ್ಣವರ್, ಶಿಕ್ಷಕರು, ಪೋಷಕರು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.























