Home ಜಿಲ್ಲೆ ನ್ಯಾಯಯುತ ಪರಿಹಾರ ಘೋಷಿಸಿ

ನ್ಯಾಯಯುತ ಪರಿಹಾರ ಘೋಷಿಸಿ


ನವಲಗುಂದ,ಸೆ.27: ಮುಂಗಾರು ಮಳೆ ಕೈಕೊಟ್ಟು ರೈತರು ಬರದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಕೇವಲ ೨,೫೦೦ ಇನ್‌ಪುಟ್ ಸಬ್ಸಿಡಿ ರೈತರ ನೋವಿಗೆ ಯಾವುದೇ ರೀತಿಯ ಪರಿಹಾರವಾಗುವುದಿಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀಜ, ಗೊಬ್ಬರ, ಬಿತ್ತನೆ ವೆಚ್ಚ ಸೇರಿದಂತೆ ರೈತರು ಎಕರೆಗೆ ಹತ್ತಾರು ಸಾವಿರ ರೂ. ಖರ್ಚು ಮಾಡಿದ್ದಾರೆ. ರೈತರು ಮಾಡಿರುವ ಖರ್ಚಿಗೆ ಹೋಲಿಸಿದರೆ ಸರ್ಕಾರ ಘೋಷಿಸಿದ ಹಣ ಅತ್ಯಲ್ಪವಾಗಿದೆ. ಬಿಜೆಪಿ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಿದ್ದಾರೆ.
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಒಂದು ಎಕರೆ ಜಮೀನಿನ ಬಿತ್ತನೆ ಹಾಗೂ ಆರಂಭಿಕ ಕೃಷಿ ಚಟುವಟಿಕೆಗೆ ೨೫ರಿಂದ ೩೦ ಸಾವಿರ ರೂ.ವರೆಗೆ ವೆಚ್ಚವಾಗುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಿ ರೈತರಿಗೆ ನ್ಯಾಯಯುತ ಪರಿಹಾರ ಘೋಷಿಸಬೇಕು. ಕನಿಷ್ಠ ೫೦ ಸಾವಿರ ರೂ. ಮಧ್ಯಂತರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.