
ಹುಳಿಯಾರು, ಸೆ. ೧೩- ಸಮರ್ಪಕವಾಗಿ ವಿದ್ಯುತ್ ಪೂರೈಸದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ನಾವು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಊರು ಬಿಟ್ಟು ಗುಳೆ ಹೋಗಬೇಕಾಗುತ್ತದೆ ಎಂದು ಹುಳಿಯಾರು ಹೋಬಳಿಯ ಟಿ.ಎಸ್.ಹಳ್ಳಿ ಭಾಗದ ರೈತರು ಹುಳಿಯಾರಿನ ಕೆಪಿಟಿಸಿಎಲ್ ಕಚೇರಿ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ೩-೪ ದಿನಗಳಿಂದ ರಾತ್ರಿ ವೇಳೆ ನಿರಂತರವಾಗಿ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಸಿಂಗಲ್ ಫೇಸ್ ಕರೆಂಟ್ ಇಲ್ಲದೆ ಕುಡಿಯುವ ನೀರಿಗೂ ಹಾಗೂ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಪರದಾಡುವಂತಾಗಿದೆ. ಹಗಲಿನಲ್ಲಿ ೨ ಗಂಟೆ ಕರೆಂಟ್ ಕೊಡುವುದಾಗಿ ಹೇಳಿ, ಎಲ್‌ಸಿ ಹಾಗೂ ಲೈನ್ ರಿಪೇರಿ ನೆಪದಲ್ಲಿ ಅರ್ಧದಿಂದ ಮುಕ್ಕಾಲು ಗಂಟೆ ಹೆಚ್ಚು ಕಟ್ ಮಾಡಲಾಗುತ್ತಿದೆ ಎಂದು ರೈತರು ದೂರಿದರು.
ಇಲಾಖೆ ನಿಗದಿಪಡಿಸಿದ ಸಮಯದ ಚಾರ್ಟ್ ಪ್ರಕಾರವೇ ನಿಖರವಾಗಿ ವಿದ್ಯುತ್ ನೀಡಬೇಕು. ಮಧ್ಯದಲ್ಲಿ ಪದೇ ಪದೇ ಚಾರ್ಟ್ ಬದಲಾಯಿಸುವುದರಿಂದ ಕೃಷಿ ಹಾಗೂ ಪಂಪ್‌ಸೆಟ್‌ಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರಸ್ತುತ ದೂರದಲ್ಲಿರುವ ಬರಕನಾಳು ಫೀಡರ್‌ನಿಂದ ವಿದ್ಯುತ್ ಸರಬರಾಜು ಮಾಡುವುದನ್ನು ಕೂಡಲೇ ಕೈಬಿಡಬೇಕು. ಕೇವಲ ೩ ಕಿ.ಮೀ ಅಂತರದಲ್ಲಿರುವ ಹುಳಿಯಾರಿನಿಂದ ಟಿ.ಎಸ್. ಹಳ್ಳಿಗೆ ಪ್ರತ್ಯೇಕವಾದ ಪ್ರತ್ಯೇಕ ಟಿ.ಎಸ್.ಹಳ್ಳಿ ಫೀಡರ್ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು.
ತೋಟಗಳಲ್ಲಿ ಕೇಬಲ್ ವೈರ್ ಕಳ್ಳತನವಾಗುತ್ತಿದ್ದು, ತೋಟಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡಲು ಕನಿಷ್ಠ ಸಿಂಗಲ್ ಫೇಸ್ ಬೆಳಕಾದರೂ ಬೇಕು. ಅದನ್ನೂ ನೀಡದಿದ್ದರೆ ರೈತರು ಹೇಗೆ ಜೀವನ ನಡೆಸಬೇಕು ಎಂದು ಪ್ರಶ್ನಿಸಿದರು.
ರೈತರು ಕೃಷಿ ಮಾಡಿ ಬದುಕದಿದ್ದರೆ ನಗರದ ಜನರಿಗೆ ಅನ್ನ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಮತ್ತು ನಾವೆಲ್ಲರೂ ಊರು ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಹುಳಿಯಾರು ಸೆಕ್ಷನ್ ಆಫಿಸರ್ ಸ್ಮಿತಾ ಮಾತನಾಡಿ, ಮಳೆ ಇಲ್ಲದೆ ಪ್ರಸ್ತುತ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಅಲ್ಲದೆ ಮೋಡ ಕವಿದ ವಾತಾವರಣವಿದ್ದ ಕಾರಣ ಸೋಲಾರ್ ವಿದ್ಯುತ್ ಉತ್ಪಾದನೆಯೂ ಕುಸಿತವಾಗಿದೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಗ್ರಿಡ್ ಲೋಡ್ ನಿರ್ವಹಣೆಗಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ೧೮ ಫೀಡರ್‌ಗಳಿದ್ದು, ಹಳ್ಳಿಗಳು ಹಾಗೂ ಬ್ಯಾಂಕ್‌ಗಳಿಗೆ ಸಮಾನವಾಗಿ ವಿದ್ಯುತ್ ಹಂಚಿಕೆ ಮಾಡಬೇಕಾಗಿದೆ. ಲೈನ್‌ಗಳಲ್ಲಿ ತಾಂತ್ರಿಕ ತೊಂದರೆ ಅಥವಾ ಟ್ರಿಪ್ ಆದಾಗ ಮಾತ್ರ ೫-೧೦ ನಿಮಿಷ ಸಮಯ ತೆಗೆದುಕೊಳ್ಳುತ್ತದೆ ಹೊರತು ಬೇಕಾಬಿಟ್ಟಿ ಕಡಿತಗೊಳಿಸುತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ರೈತರಿಗಾಗುತ್ತಿರುವ ತೊಂದರೆ ವಿವರಿಸಿ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
































