
ಭಾಲ್ಕಿ: ತಾಲೂಕಿನ ನಿಟ್ಟೂರು ಬಿ ಗ್ರಾಮದಲ್ಲಿರುವ ಮಹಾತ್ಮ ಜ್ಯೋತಿಬಾ ಫುಲೆ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘ (ರಿ.) ವತಿಯಿಂದ ಮಂಗಳವಾರ (ಆ.25) “ವ್ಯಸನ ಮತ್ತು ಮೂಢನಂಬಿಕೆ ಮುಕ್ತ ಸಮಾಜ ನಿರ್ಮಾಣ ಮಾಡೋಣ” ಹಾಗೂ “ಮಾನಸಿಕ ರೋಗಗಳ ಕುರಿತು ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯರಾದ ಶ್ರೀ ವಿಠ್ಠಲ್ ದಾಸ ಪ್ಯಾಗೆ ಅವರು, ಪ್ರಸ್ತುತ ಸಮಾಜದಲ್ಲಿ ಅನೇಕರು ವಿವಿಧ ರೀತಿಯ ವ್ಯಸನಗಳಿಗೆ ತುತ್ತಾಗುತ್ತಿದ್ದು, ಇದರಿಂದ ವಿಶೇಷವಾಗಿ ಯುವಜನರು ತಮ್ಮ ಮಾನಸಿಕ ಸ್ಥೈರ್ಯ ಹಾಗೂ ವ್ಯಕ್ತಿತ್ವವನ್ನು ಕಳೆದುಕೊಳ್ಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾರಾಯಿ ಸೇವನೆ, ಸಿಗರೇಟ್, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳಂತಹ ದುಶ್ಚಟಗಳು ವ್ಯಕ್ತಿಯ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತವೆ. ಇಂತಹ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯಕರ ಹಾಗೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಗಳಿಗೆ ಜನರು ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಾಣಿ ಬಲಿ ನೀಡುವುದು, ಹಣ ಹಾಗೂ ಸಮಯವನ್ನು ಅನಗತ್ಯವಾಗಿ ವ್ಯರ್ಥ ಮಾಡುವುದು ಮುಂತಾದ ಚಟುವಟಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನ ರೂಪಿಸಿಕೊಳ್ಳಲು ತಮ್ಮ ಕಾಯಕ ಹಾಗೂ ಪರಿಶ್ರಮವನ್ನು ನಂಬಬೇಕು. ಕಷ್ಟಗಳನ್ನು ದೂರ ಮಾಡುವ ಶಕ್ತಿ ನಮ್ಮ ಪರಿಶ್ರಮದಲ್ಲಿಯೇ ಇದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಗಣಪತಿ ಭಕ್ತ ಅವರು ಮಾತನಾಡಿ, ವಿದ್ಯಾರ್ಥಿಗಳು ವ್ಯಸನ ಹಾಗೂ ಮೂಢನಂಬಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದು, ಶಿಕ್ಷಣ, ಜ್ಞಾನ ಮತ್ತು ಉತ್ತಮ ಚಿಂತನೆಗಳತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಪ್ರಮುಖ ಕೇಂದ್ರಬಿಂದುವಾಗಿದ್ದ ಸಾಹಿತಿ ಶ್ರೀ ಶರಣು ಫುಲೆ ಅವರು ಮಾನಸಿಕ ಆರೋಗ್ಯ ಮತ್ತು ಮಾನಸಿಕ ರೋಗಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಆಧುನಿಕ ಜೀವನಶೈಲಿಯಲ್ಲಿ ಅನೇಕರು ಒತ್ತಡ, ಖಿನ್ನತೆ, ನಿದ್ರಾಹೀನತೆ ಹಾಗೂ ಕೌಟುಂಬಿಕ ಕಲಹ ಸೇರಿದಂತೆ ವಿವಿಧ ಕಾರಣಗಳಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸೂಕ್ತ ಅರಿವು ಮತ್ತು ಅಗತ್ಯ ನೆರವು ಪಡೆಯಬೇಕು. ವಿದ್ಯಾರ್ಥಿಗಳು ವ್ಯಸನ ಹಾಗೂ ಮೂಢನಂಬಿಕೆಗಳಿಂದ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಾಬುರಾವ್ ಮಾಳಗೆ ಅವರು ವಹಿಸಿದ್ದರು. ಆಯುಷ್ಮಾನ್ ಸೂರ್ಯಕಾಂತ್ ಭಾವಿದೊಡ್ಡಿ, ಆಯುಷ್ಮಾನ್ ಕಲ್ಲಪ್ಪ ಕೈವಾರೆ ಹಾಗೂ ಯುವ ಮುಖಂಡ ಹರ್ಷಿತ್ ದಾಂಡೇಕರ್ ಅವರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಹಾಗೂ ‘ಮಾರ್ಗದಾತ’ ಕನ್ನಡ ದಿನಪತ್ರಿಕೆ ಬಿಡುಗಡೆ ಕಾರ್ಯಕ್ರಮವೂ ನಡೆಯಿತು. ನಿಟ್ಟೂರು ಗ್ರಾಮದ ಸಿದ್ಧಾರ್ಥ ಭಜನಾ ಮಂಡಳಿ ಹಾಗೂ ಕಲಾವಿದರಿಂದ ಜಾನಪದ ಗೀತೆಗಳು ಮತ್ತು ಭಜನೆಗಳ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಭೀಮರಾವ್ ಮಾಲಗತ್ತಿ ಅವರು ಸ್ವಾಗತ ಭಾಷಣ ಮಾಡಿದರು. ನಾಗೇಶ್ ಚಲ್ವಾ, ಅಶೋಕ್ ಬೋರಳೆ, ನಸಿರ್ಂಗ, ಗೋರಕನಾಥ್, ತುಳಸಿರಾಮ್, ಶ್ರೀಮತಿ ಗೌತಮಿ, ಶ್ರೀಮತಿ ಶಾಂತಮ್ಮ ಫುಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಕೇಶ್ ಚಲ್ವಾ ಅವರು ನಿರೂಪಿಸಿದರು.






























