
ನವದೆಹಲಿ,ಅ.೧೦-ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಕರಾಳವಾದ ವಾತಾವರಣ ನಿರ್ಮಾಣವಾಗಿದ್ದು, ನಾವೀಗ ಸಂಪೂರ್ಣ ಸರ್ವಾಧಿಕಾರದಲ್ಲಿ ಬದುಕುತ್ತಿದ್ದೇವೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ನಿಗದಿಯಾಗಿದ್ದ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಕೈಗೊಂಡ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಹಾಗೂ ಮುಂಜಾಗ್ರತಾ ಬಂಧನಗಳನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಸಿಜೆಪಿ ನಾಯಕರನ್ನು ವಿಮಾನದಿಂದಿಳಿಯುತ್ತಿದ್ದಂತೆ ವಶಕ್ಕೆ ಪಡೆದಿರುವುದನ್ನು ಉಲ್ಲೇಖಿಸಿರುವ ಅವರು, ಇದು ಸರ್ಕಾರದ ಅಭೂತಪೂರ್ವ ಭಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ತುರ್ತು ಪರಿಸ್ಥಿತಿಯ ದಿನಗಳನ್ನೂ ಮೀರಿಸಿದೆ ಎಂದು ಆರೋಪಿಸಿರುವ ಕೇಜ್ರಿವಾಲ್, ಪ್ರಧಾನಿಯವರು ತಾವೆಂದಿಗೂ ಕೇವಲ ಮತಗಳ ಕಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಡಳಿತದ ಲೋಪಗಳನ್ನು ಮುಚ್ಚಿಕೊಳ್ಳಲು ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸರ್ಕಾರವು ಇಂತಹ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸುತ್ತಿದೆ ಎಂದು ಅವರು ಎಕ್ಸ್ (ಟ್ವಿಟರ್) ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.























