Home ಜಿಲ್ಲೆ ಬೆಂಗಳೂರು ಜಿಲ್ಲಾದ್ಯಂತ ವಹ್ನಿಕುಲ ದ್ರೌಪದಮ್ಮ ಜಯಂತೋತ್ಸವ ಆಚರಣೆ

ಜಿಲ್ಲಾದ್ಯಂತ ವಹ್ನಿಕುಲ ದ್ರೌಪದಮ್ಮ ಜಯಂತೋತ್ಸವ ಆಚರಣೆ

ಕೋಲಾರ, ಸೆ.೨- ತಿಗಳ,ವಹ್ನಿಕುಲ ಕ್ಷತ್ರಿಯ ಸಮುದಾಯದ ಆರಾಧ್ಯ ದೈವವಾದ ದ್ರೌಪತಾಂಭ ಜಯಂತೋತ್ಸವವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಲ್.ಎ.ಮಂಜುನಾಥ್ ಮನವಿ ಮಾಡಿದರು.


ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಾಲಯಗಳಲ್ಲಿ ವಹ್ನಿಕುಲ ಕ್ಷತ್ರಿಯ ಕುಲ ಬಾಂಧವರಿಂದ ಮಂಗಳವಾರ ನಡೆದ ಶ್ರೀ ದ್ರೌಪದಮ್ಮ ನವರ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡುತ್ತಿದ್ದರು.


ಸರ್ಕಾರ ಇತರೆ ಎಲ್ಲಾ ಜಯಂತಿಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಹಾಗೆಯೇ ವಹ್ನಿಕುಲ ಕ್ಷತ್ರಿಯ ಆರಾಧ್ಯ ದೇವತೆ ದ್ರೌಪದಮ್ಮನವರ ಜಯಂತೋತ್ಸವವನ್ನು ಆಚರಿಸಬೇಕು. ಈ ಕುರಿತು ಸರ್ಕಾರದ ಗಮನವನ್ನು ಸೆಳೆಯಲು ನಮ್ಮ ಸಮುದಾಯದ ಹಿರಿಯ ಮುಖಂಡರ ಜೊತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.


ವಹ್ನಿಕುಲ, ತಿಗಳ ಸಮುದಾಯದ ಸಮಗ್ರ ಅಭಿವೃದ್ದಿಗೆ ಕ್ರಮವಹಿಸುವುದಾಗಿ ತಿಳಿಸಿದ ಅವರು, ತಮ್ಮನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿ, ಹಿಂದುಳಿದಿರುವ ನಮ್ಮ ಸಮುದಾಯದ ಸಮಗ್ರ ಅಭಿವೃದ್ದಿಗೆ ಅನುಕೂಲವಾಗುವಂತೆ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.


ಸಮುದಾಯ ಸಂಘಟಿತವಾದರೆ ಮಾತ್ರವೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ತಿಳಿಸಿದ ಅವರು, ಸಮುದಾಯದ ಜನ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು, ರಾಜಕೀಯ, ಆರ್ಥಿಕ ಸ್ಥಾನಮಾನ ಪಡೆಯಲು ಸಂಘಟಿತ ಹೋರಾಟಕ್ಕೆ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.


ದ್ರೌಪತಾಂಬ ದೇವಿಗೆ
ವಿಶೇಷ ಪೂಜೆ

ಜಿಲ್ಲಾದ್ಯಂದ ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ದ್ರೌಪದಮ್ಮ ನವರ ಜಯಂತೋತ್ಸವ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು, ಹಾಗೆಯೇ ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಸಾಮಾಜಿಕ ಚಟುವಟಿಕೆಗಳನ್ನು ವಹ್ನಿಕುಲ ಕ್ಷತ್ರಿಯ ಕುಲಬಾಂಧವರು ನೆರವೇರಿಸಿದರು.


ದ್ರೌಪದಮ್ಮ ಜಯಂತೋತ್ಸವ ಅಂಗವಾಗಿ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಲ್.ಎ.ಮಂಜುನಾಥ್ ನಗರದ ಕಠಾರಿಪಾಳ್ಯ, ಕಾರಂಜಿಕಟ್ಟೆ, ಸೇರಿದಂತೆ ವೇಮಗಲ್, ನರಸಾಪುರ, ಬೇತಮಂಗಳದಲ್ಲಿರುವ ಶ್ರೀ ದ್ರೌಪದಮ್ಮ ದೇವಾಲಯಗಳಿಗೆ ಭೇಟಿ ನೀಡಿ ಜಯಂತೋತ್ಸವದಲ್ಲಿ ಭಾಗವಹಿಸಿದ್ದರು.


ಎಲ್ಲಾ ದೇವಾಲಯಗಳಲ್ಲೂ ವಿಶೇಷವಾಗಿ ದ್ರೌಪದಮ್ಮ ದೇವಿಗೆ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಜರುಗಿದೆ. ದೇವಿಯ ಉತ್ಸವ ಮೂರ್ತಿಯನ್ನು ಮಲ್ಲಿಗೆ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ಮೆರವಣಿಗೆ ನಡೆಸಲಾಯಿತು.


ಈ ಸಂದರ್ಭದಲ್ಲಿ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಎಂ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಮೈಕ್ ಶಂಕರ್, ಖಜಾಂಚಿ ನರಸಾಪುರ ಶ್ರೀನಿವಾಸ್, ಸಮುದಾಯ ಮುಖಂಡರಾದ ಪಾಲ್ಗುಣ, ವಿ.ಪಿ.ಪ್ರಕಾಶ್, ಮುದುವತ್ತಿ ಬಾಬು, ಕಠಾರಿಪಾಳ್ಯ ನಾಗರಾಜ್, ಬೇತಮಂಗಳ ಸುಬ್ರಮಣಿ, ವೆಂಕಟೇಶ್ ಮೂರ್ತಿ, ಷಣ್ಮುಗ ಸೇರಿದಂತೆ ಕುಲಬಾಂಧವರು ಉಪಸ್ಥಿತರಿದ್ದರು.