Home ಜಿಲ್ಲೆ ಕೆ.ಇ.ಆರ್.ಸಿ ಕರಡು ನಿಯಮಕ್ಕೆ ತೀವ್ರ ವಿರೋಧ

ಕೆ.ಇ.ಆರ್.ಸಿ ಕರಡು ನಿಯಮಕ್ಕೆ ತೀವ್ರ ವಿರೋಧ

ಬೀದರ್: ರಾಜ್ಯದಲ್ಲಿ ೧೫೦ ಕೆ.ವಿ ಅಥವಾ ೬೫೦ ವ್ಯಾಟ್‌ಗಿಂತ ಕಡಿಮೆ ಒತ್ತಡದ ವಿದ್ಯುತ್ ಸಂಪರ್ಕಗಳನ್ನು ಮಾಲೀಕರೇ ಪರಿಶೀಲಿಸಿ, ಪರೀಕ್ಷಿಸಿ, ಸ್ವಯಂ ಪ್ರಮಾಣೀಕರಿಸಲು ಅವಕಾಶ ನೀಡುವ ಕೆಇಆರ್‌ಸಿ ಕರಡು ನಿಯಮಕ್ಕೆ ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೀದರ್ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಂಘದ ಬೀದರ್ ಘಟಕದ ಪದಾಧಿಕಾರಿಗಳು ಈ ಕುರಿತು ಕೆಇಆರ್‌ಸಿ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೆಇಆರ್‌ಸಿ ನಿಯಮ ಅವೈಜ್ಞಾನಿಕವಾಗಿದೆ. ಜನರ ಜೀವದೊಂದಿಗೆ ಚೆಲ್ಲಾಟ ಆಡುವ ನಿಯಮವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ೫೦ ಸಾವಿರಕ್ಕೂ ಅಧಿಕ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಗ್ರಾಹಕರ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದಾರೆ. ಅವರ ಬಳಿ ೫ ರಿಂದ ೬ ಲಕ್ಷ ಮಂದಿ ವೈರ್‌ಮೆನ್, ಸೂಪರ್‌ವೈಸರ್ ಹಾಗೂ ಇತರ ಸಿಬ್ಬಂದಿ ಇದ್ದಾರೆ. ಕೆಇಆರ್‌ಸಿ ನಿಯಮದಿಂದ ಅವರ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಗ್ರಾಹಕರ ಸುರಕ್ಷತೆಗಾಗಿ ಸ್ವಯಂ ದೃಢೀಕರಣದ ಬದಲು ಅನುಮತಿ ಪಡೆದ ಗುತ್ತಿಗೆದಾರರ ಮೂಲಕ ಪರಿವೀಕ್ಷಣೆ ಹಾಗೂ ದೃಢೀಕರಣ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಪತ್ರದರ್ಶನ: ಸಂಘದ ಪದಾಧಿಕಾರಿಗಳು ವ್ಯವಸ್ಥಾಪಕರಿಗೆ ಕಳುಹಿಸಿದ ಮನವಿ ಪತ್ರದ ಪ್ರತಿಯನ್ನು ನಗರದ ಜೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಪ್ರದರ್ಶಿಸಿದರು.
ಸಂಘದ ಬೀದರ್ ಘಟಕದ ಅಧ್ಯಕ್ಷ ರಾಜಕುಮಾರ ಸಂಗನಳ್ಳಿ, ಕಾರ್ಯದರ್ಶಿ ಪ್ರವೀಣ್, ಸದಸ್ಯರಾದ ರಾಜಗುರು ಸಿಂಧೆ, ಡೆಲ್ವಿನ್ ಹೊಸಮನಿ, ಶಿವಕುಮಾರ ಜಾಧವ್, ಅನಿಲ್, ರಮೇಶ್, ಕರುಣೇಶ್, ಮಂಜು, ಲೋಕೇಶ್, ಕುಮಾರ್, ಶೇಕ್ ಮಜೀದ್ ಮತ್ತಿತರರು ಇದ್ದರು.