
ಕೋಲಾರ, ಸೆ.೨-ಇತ್ತೀಚೆಗೆ ಮರು-ಪರಿಶೀಲನೆ ಕಾರಣದಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿಗಳ ಬಗ್ಗೆ ಹಿರಿಯ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಕಾನೂನು ಸೇವಾ ಪ್ರಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಶಾರಾದ ಪ್ರಭು. ಎನ್. ಬಡಿಗೇರ್ ಅವರು ಭರವಸೆ ನೀಡಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ’ಕಾನೂನು ಅರಿವು ಮತ್ತು ನೆರವು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮರು ಸಮೀಕ್ಷೆ ಹಿನ್ನೆಲೆಯಲ್ಲಿ ಹಲವರ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಮರು-ಮಂಜೂರಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಫಲಾನುಭವಿಗಳ ಆದಾಯ ಮಿತಿಯನ್ನು ೩೨,೦೦೦ ರೂ. ಗಳಿಂದ ೧.೨೦ ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದ್ದು, ೬೦ ರಿಂದ ೬೪ ವರ್ಷದವರು ವೃದ್ಧಾಪ್ಯ ವೇತನ ಹಾಗೂ ೬೫ ವರ್ಷ ಮೇಲ್ಪಟ್ಟವರು ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದರು.
೨೦೦೭ರ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯನ್ವಯ, ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳ ವಿರುದ್ಧ ಉಪವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ದೂರು ದಾಖಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು. “ನಿಮ್ಮ ಆಸ್ತಿಯನ್ನು ಯಾರಾದರೂ ಕಬಳಿಸಿದರೆ ಅಥವಾ ಮೋಸದಿಂದ ತಮ್ಮ ಹೆಸರಿಗೆ ಮಾಡಿಕೊಂಡರೆ, ನಾವು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತವಾಗಿ ಕೇಸ್ ಹಾಕಿ, ನಿಮಗೆ ನ್ಯಾಯ ಒದಗಿಸಿಕೊಡುತ್ತೇವೆ. ಇದಕ್ಕೆ ನೀವು ಯಾವುದೇ ವಕೀಲರಿಗೆ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು.
ವಯಸ್ಸಾದ ಕಾರಣ ನ್ಯಾಯಾಲಯಕ್ಕೆ ಅಲೆಯಲು ಸಾಧ್ಯವಾಗದಿದ್ದರೆ, ’ಪವರ್ ಆಫ್ ಅಟಾರ್ನಿ ಮೂಲಕ ನಿಮ್ಮ ಪರವಾಗಿ ಕೇಸ್ ನಡೆಸಲು ಮಕ್ಕಳು ಅಥವಾ ಸಂಬಂಧಿಕರಿಗೆ ಅಧಿಕಾರ ನೀಡಬಹುದು ಎಂದೂ ಅವರು ವಿವರಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಕಡ್ಡಾಯವಾಗಿ ಪ್ರತ್ಯೇಕ ಸರದಿ ಸಾಲು ಹಾಗೂ ಪ್ರತ್ಯೇಕ ವಿಭಾಗವಿರಬೇಕು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಬೆಡ್ ಸೌಲಭ್ಯ ಒದಗಿಸುವುದು ಆಸ್ಪತ್ರೆಗಳ ಜವಾಬ್ದಾರಿಯಾಗಿದೆ ಎಂದು ಅವರು ವಿವರಿಸಿದರು.
ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳಿಗೆ ಅತಿ ಹೆಚ್ಚಿನ ಆದ್ಯತೆ ನೀಡಿ ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು. ಯಾವುದೇ ಸರ್ಕಾರಿ ಇಲಾಖೆಗಳಿಂದ ಸೌಲಭ್ಯ ವಂಚಿತರಾದಲ್ಲಿ, ಉಚಿತ ಕಾನೂನು ಸೇವಾ ಪ್ರಾಧಿಕಾರದಲ್ಲಿ ’ವ್ಯಾಜ್ಯ ಪೂರ್ವ ಪ್ರಕರಣ’ ದಾಖಲಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶುಭಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಮಂಜುಳಾ ಮತ್ತು ತಾಲೂಕು ಪಂಚಾಯಿತಿ ಲೆಕ್ಕಪರಿಶೋಧನಾಧಿಕಾರಿ ಚಂದನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

































