
ಕೋಲಾರ,ಸೆ.೨- ಈಗಾಗಲೇ ನಿಗದಿಪಡಿಸಿರುವ ಸ್ಮಶಾನದಲ್ಲೇ ವಿದ್ಯುತ್ ಚಿತಾಗಾರ ನಿರ್ಮಿಸಲಾಗುವುದು. ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ಕಠಾರಿಪಾಳ್ಯದಲ್ಲಿ ದ್ರೌಪತಾಂಬ ಜನ್ಮದಿನ ಅಂಗವಾಗಿ ದೇಗುಲದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿದ್ಯುತ್ ಚಿತಾಗಾರವನ್ನು ಎಲ್ಲಿ ನಿರ್ಮಿಸಬೇಕು? ರಸ್ತೆಯಲ್ಲಿ ನಿರ್ಮಿಸಲು ಆಗುತ್ತದೆಯೇ? ಅಥವಾ ಬೇರೆಯವರ ಜಮೀನಿನಲ್ಲಿ ನಿರ್ಮಿಸಲು ಸಾಧ್ಯವೇ? ಸ್ಮಶಾನದಲ್ಲೇ ನಿರ್ಮಿಸಬೇಕು. ನಾವು ಅದೇ ಜಾಗದಲ್ಲಿ ಭೂಮಿಪೂಜೆ ಮಾಡಿದ್ದೇವೆ, ಕಾಮಗಾರಿಯೂ ಅಲ್ಲಿಯೇ ನಡೆಯುತ್ತಿದೆ ಎಂದರು.
೧೦ ಜನ ವಿರೋಧ ಮಾಡಿದರೆ, ಸಾವಿರ ಜನ ವಿದ್ಯುತ್ ಚಿತಾಗಾರ ನಿರ್ಮಾಣದ ಪರವಾಗಿದ್ದಾರೆ. ಸುಮ್ಮನೇ ಗಲಾಟೆ ಮಾಡಲು ಬಂದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸೆ.೫ ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಿಂಚಣಿ, ಪಡಿತರ ಚೀಟಿ, ಗೋಮಾಳ, ಕೆರೆ, ರಾಜಕಾಲುವೆ, ಕಾಲುದಾರಿ, ಸ್ಮಶಾನ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು. ಶೇ ೯೦ ರಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಕಂಪ್ಯೂಟರ್, ಇಂಟರ್ನೆಟ್, ಪ್ರಿಂಟರ್ ಸಮೇತ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದು ಜಿಲ್ಲಾ ಮಟ್ಟದ ಕಾರ್ಯಕ್ರಮ ಇದಾಗಿದ್ದು, ಪ್ರಮುಖವಾಗಿ ಕೋಲಾರ ತಾಲ್ಲೂಕಿನವರು ತಪ್ಪದೇ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬೇಕು. ನಂತರ ಹೋಬಳಿ ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚಾನಕ್ ಆಗಿ ಕಾರ್ಯಕ್ರಮ ನಡೆಸುವ ಸ್ಥಳಕ್ಕೆ ಬರುವ ಸಾಧ್ಯತೆಗಳು ಇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸದಸ್ಯ ಚೊಕ್ಕಪುರ ಚೌಡಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಕೆ.ವಿ ಗೌತಮ್, ಕಠಾರಿಪಾಳ್ಯ ಗಂಗಣ್ಣ, ಚಿಟ್ಟಿ, ಅಮರನಾಥ್, ಪೆರ್ಜೇನಹಳ್ಳಿ ನಾಗೇಶ್, ಹಾರೋಹಳ್ಳಿ ರಾಜೇಶ್, ರಾಜಕಲ್ಲಹಳ್ಳಿ ಶ್ರೀನಿವಾಸ್ ಚಿನ್ನಾಪುರ ನಾರಾಯಣಸ್ವಾಮಿ, ಸೇರಿದಂತೆ ಮುಂತಾದವರು ಇದ್ದರು

































