
ವಾಷಿಂಗ್ಟನ್/ಟೆಹ್ರಾನ್:.ಜೂ೨೭: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿದ ಇರಾನ್ ವಿರುದ್ಧ ಅಮೆರಿಕ ಸೇನೆ ಭೀಕರ ಪ್ರತಿಕಾರ ತೀರಿಸಿಕೊಂಡಿದೆ. ಜೂನ್ ೨೭ರ ಮುಂಜಾನೆ ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಸರಣಿ ವಾಯುಪ್ರಹಾರ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಅಇಓಖಿಅಔಒ) ದೃಢಪಡಿಸಿದೆ. ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದಕ್ಕಾಗಿ ಇತ್ತೀಚೆಗಷ್ಟೇ ಸಹಿ ಹಾಕಲಾಗಿದ್ದ ಒಪ್ಪಂದದ ಬಳಿಕ ನಡೆದ ಮೊದಲ ನೇರ ಮಿಲಿಟರಿ ಸಂಘರ್ಷ ಇದಾಗಿದೆ.
ದಾಳಿಯ ಬೆನ್ನಲ್ಲೇ ದಕ್ಷಿಣ ಇರಾನ್‌ನ ಸಿರಿಕ್ ಪ್ರದೇಶದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.
ಜೂನ್ ೨೫ ರಂದು ಒಮಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯಲ್ಲಿ ಸಿಂಗಾಪುರ ಧ್ವಜ ಹೊತ್ತ ‘ಎಂ/ವಿ ಎವರ್ ಲವ್ಲಿ’ ಎಂಬ ವಾಣಿಜ್ಯ ಕಾರ್ಗೋ ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿತ್ತು.
ಇದಕ್ಕೆ ಪ್ರತಿಯಾಗಿ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ನೆಲೆಗಳು ಹಾಗೂ ಕರಾವಳಿ ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಜೂನ್ ೧೭ ರಂದು ಅಮೆರಿಕ ಮತ್ತು ಇರಾನ್ ನಡುವೆ ೧೪ ಅಂಶಗಳ ಕದನ ವಿರಾಮ ಒಪ್ಪಂದ (ಒoU) ನಡೆದಿತ್ತು. ಈ ಒಪ್ಪಂದವಾಗಿ ಕೇವಲ ೧೦ ದಿನಗಳಲ್ಲಿ ಇರಾನ್ ಉಲ್ಲಂಘನೆ ಮಾಡಿದೆ ಎಂದು ಅಮೆರಿಕ ದೂರಿದೆ.
ಈ ಉದ್ವಿಗ್ನ ಪರಿಸ್ಥಿತಿಯ ನಡುವೆ ಜಲಸಂಧಿಯ ಭಾಗದಿಂದ ಸುಮಾರು ೧೧,೦೦೦ಕ್ಕೂ ಹೆಚ್ಚು ಜಾಗತಿಕ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗುತ್ತಿದೆ.
ಟ್ರಂಪ್ ನೀಡಿದ್ದ ಮುನ್ನೆಚ್ಚರಿಕೆ
ಮಿಲಿಟರಿ ಕಾರ್ಯಾಚರಣೆಗೆ ಕೆಲವು ಗಂಟೆಗಳ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ತಕ್ಕ ಶಾಸ್ತಿ ಮಾಡುವ ಮುನ್ಸೂಚನೆ ನೀಡಿದ್ದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಅವರು, “ನಮ್ಮ ಹಡಗಿನ ಮೇಲೆ ದಾಳಿ ಮಾಡಿರುವುದನ್ನು ನಾನು ಸಹಿಸುವುದಿಲ್ಲ. ಅದಕ್ಕೆ ತಕ್ಕ ಪರಿಣಾಮವನ್ನು ನೀವು ಶೀಘ್ರದಲ್ಲೇ ನೋಡಲಿದ್ದೀರಿ” ಎಂದು ಎಚ್ಚರಿಸಿದ್ದರು. ಅಲ್ಲದೆ, ಇರಾನ್ ಉಚಿತವಾಗಿ ಹಡಗುಗಳ ಸಂಚಾರಕ್ಕೆ ಬಿಡದಿದ್ದರೆ ಶಾಂತಿ ಮಾತುಕತೆ ತಕ್ಷಣವೇ ಕೊನೆಗೊಳ್ಳಲಿದೆ ಎಂದು ತಮ್ಮ ’ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದರು.
ಅಮೆರಿಕದ ಈ ವಾಯುದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ “ಅಮೆರಿಕದ ದಾಳಿಯನ್ನು ನಾವು ಯಶಸ್ವಿಯಾಗಿ ತಡೆದಿದ್ದೇವೆ. ಈ ಆಕ್ರಮಣಕ್ಕೆ ನಾವು ನಮ್ಮದೇ ಆದ ಸಮಯ ಮತ್ತು ಸೂಕ್ತ ಸ್ಥಳದಲ್ಲಿ ಅತ್ಯಂತ ಕಠಿಣ ಹಾಗೂ ತಕ್ಷಣದ ನಿರ್ಣಾಯಕ ಪ್ರತಿಕಾರ ನೀಡಲಿದ್ದೇವೆ” ಎಂದು ಗುಡುಗಿದೆ. ಅಲ್ಲದೆ ಇನ್ನು ಮುಂದೆ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಮೊದಲಿನಂತೆ ಇರುವುದಿಲ್ಲ, ಇರಾನ್ ಸೂಚಿಸುವ ಮಾರ್ಗದಲ್ಲೇ ಚಲಿಸಬೇಕು, ಇಲ್ಲದಿದ್ದರೆ ಭದ್ರತೆಯ ಗ್ಯಾರಂಟಿ ಇರುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಹೊರ್ಮುಜ್ ಜಲಸಂಧಿಯು ಜಾಗತಿಕ ಇಂಧನ (ತೈಲ ಮತ್ತು ಗ್ಯಾಸ್) ಸಾಗಣೆಯ ಅತ್ಯಂತ ಪ್ರಮುಖ ಜೀವನಾಡಿಯಾಗಿದೆ. ಇಲ್ಲಿ ಉಂಟಾಗುವ ಸಣ್ಣ ಏರುಪೇರೂ ಜಾಗತಿಕ ಆರ್ಥಿಕತೆ ಮತ್ತು ಕಚ್ಚಾ ತೈಲ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಸದ್ಯ ಇಡೀ ವಿಶ್ವದ ಕಣ್ಣು ಈ ಪ್ರಾದೇಶಿಕ ಉದ್ವಿಗ್ನತೆಯ ಮೇಲಿದೆ.






















