
ಬೆಂಗಳೂರು, ಜೂ. ೨೭- ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಬೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇಂದು ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತಾ ಕುಳಿತಿದ್ದರು. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೈರಮಂಗಲಕ್ಕೆ ಬಾರದೆ ದೂರ ಉಳಿದರು.
ಬಿಡದಿ ಟೌನ್‌ಶಿಪ್‌ಗೆ ಸಂಪಂಧಿಸಿದಂತೆ ವಿಧಾನಸೌಧದಲ್ಲಿ ಚರ್ಚೆ ಮಾಡೋಣ ಎಂಬ ಮುಖ್ಯಮಂತ್ರಿಗಳ ಆಹ್ವಾನಕ್ಕೆ ಒಪ್ಪದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಭೂಮಿ ಕಳೆದುಕೊಂಡ ರೈತರ ಸಮ್ಮುಖದಲ್ಲಿ ಬೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಇಂದು ಸಮಯ ನಿಗದಿ ಮಾಡಿದ್ದರು .ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಳೆದ ೩ ದಿನಗಳ ಹಿಂದೆಯೇ ಪತ್ರ ಬರೆದಿದ್ದರು. ಆ ಪತ್ರಕ್ಕೆ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟಿರಲಿಲ್ಲ.
ಮುಖ್ಯಮಂತ್ರಿಗಾಗಿ ನಾನು ಇಂದು ಬೈರಮಂಗಲದಲ್ಲೇ ಕಾಯುತ್ತೇನೆ ಎಂದು ನಿನ್ನೆ ಹೇಳಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಮಧ್ಯಾಹ್ನ ೧೨ ಗಂಟೆಯಿಂದ ಸಂಜೆಯವರೆಗೂ ಬೈರಮಂಗಲದಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಜತೆ ಮುಖ್ಯಮಂತ್ರಿಗಾಗಿ ಕಾದು ಕುಳಿತರಾದರೂ ಮುಖ್ಯಮಂತ್ರಿಗಳು ಬೈರ ಮಂಗಲಕ್ಕೆ ಬರಲಿಲ್ಲ. ಹಾಗಾಗಿ ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮುಖ್ಯಮಂತ್ರಿಗಳ ನಡುವೆ ಚರ್ಚೆಗಳು ಆಗಲಿಲ್ಲ.
ಬೈರಮಂಗಲದಲ್ಲಿ ಹೋರಾಟ ನಡೆಸುತ್ಕಿರುವ ರೈತರ ಜಂತೆ ಕುರ್ಚಿ ಹಾಕಿಕೊಂಡು ಮುಖ್ಯಮಂತ್ರಿಗಳಿಗೂ ಒಂದು ಕುರ್ಚಿ ಹಾಕಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಕಾಯುತ್ತಾ ಕುಳಿತರಾದರೂ ಮುಖ್ಯಮಂತ್ರಿಗಳ ಕುರ್ಚಿ ಖಾಲಿಯೇ ಉಳಿಯಿತು. ಆ ಕುರ್ಚಿಯನ್ನು ಅಲಂಕರಿಸಬೇಕಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೈರಮಂಗಲದತ್ತ ಸುಳಿಯಲಿಲ್ಲ.
ಯಾವುದೇ ವಿಚಾರದ ಚರ್ಚೆ ವಿಧಾನಸೌಧದಲ್ಲೇ ಆಗಬೇಕೆ ಹೊರತು ಬೀದಿಯಲ್ಲಿ ಅಲ್ಲ, ಈ ಹಿಂದೆ ಕುಮಾರಸ್ವಾಮಿ ಸಹ ವಿಧಾನಸೌಧದಲ್ಲೇ ರೈತರ ಭೂಸ್ವಾದೀನಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದರು. ಹಾಗಾಗಿ ನಾನು ವಿಧಾನಸೌಧದಲ್ಲೇ ಚರ್ಚೆ ಮಾಡುತ್ತೇನೆ ಹೊರತು ಬೇರೆ ಕಡೆ ಅಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದರಾದರೂ ಪಟ್ಟು ಬಿಡದ ಕುಮಾರಸ್ವಾಮಿ ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಚರ್ಚೆಗೆ ಕಾದು ಕುಳಿತಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೈರಮಂಗಲಕ್ಕೆ ಬಾರದ ಕಾರಣ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿಗೆ ವಾಪಸ್ ಬಂದರು.






















