
ಬೆಂಗಳೂರು, ಜೂ. ೨೭- ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಇಂದು ತನ್ನ ವರದಿಯನ್ನು ಸಲ್ಲಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೇತೃತ್ವದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಹಾಗೂ ಮಾಜಿ ಸಚಿವ ಎನ್. ಮಹೇಶ್ ರವರನ್ನೊಳಗೊಂಡಂತೆ ಮೂವರ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದರು.
ಈ ಸತ್ಯಶೋಧನಾ ಸಮಿತಿ ಇಂದು ತನ್ನ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದೆ.
ಮುಚ್ಚಿದ ಲಕೋಟೆಯಲ್ಲಿ ಮೂರು ಪುಟಗಳ ವರದಿಯನ್ನು ಸಲ್ಲಿಸಲಾಗಿದ್ದು, ಮೈತ್ರಿ ಪಕ್ಷದಿಂದ ಒಟ್ಟು ೧೨ ಶಾಸಕರು ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದು, ಇದರಲ್ಲಿ ಬಿಜೆಪಿಯಿಂದ ೪ ಅಡ್ಡಮತದಾನವಾಗಿದೆ. ಅದರಲ್ಲಿ ಒಂದು ಮತ ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿದೆ. ಉಳಿದ ೮ ಮತಗಳು ಜೆಡಿಎಸ್‌ನಿಂದ ಅಡ್ಡಮತದಾನವಾಗಿದೆ ಎಂದು ಹೇಳಲಾಗಿದೆ.
ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರುಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ ಎಂದು ಹೇಳಲಾಗಿದ್ದು, ಅನುಮಾನ ಇರುವ ಶಾಸಕರ ಮೇಲೆ ನಿಗಾ ಇಡುವಂತೆ ಸಮಿತಿ ವರದಿಯಲ್ಲಿ ಹೇಳಿದೆ.
ಈ ವರದಿಯನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗುತ್ತದೆ. ಈ ವರದಿಯಲ್ಲಿ ಯಾವೆಲ್ಲಾ ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂಬ ವಿವರಗಳನ್ನು ಉಲ್ಲೇಖಿಸಲಾಗಿದ್ದು, ಈ ವರದಿಯನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗುತ್ತದೆ.
ವರದಿಯಲ್ಲಿ ಯಾವ ಶಾಸಕರುಗಳ ಹೆಸರಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದ್ದು, ಈ ವರದಿ ವರಿಷ್ಠರ ಕೈ ಸೇರಿದ ನಂತರವೇ ಶಾಸಕರುಗಳ ಹೆಸರುಗಳು ಗೊತ್ತಾಗಲಿದೆ.
ಕಳೆದ ಮಂಗಳವಾರ ಬಿಜೆಪಿ ರಾಷ್ಟ್ರೀಯ ನಿತಿನ್ ನಬಿನ್ ರವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭೇಟಿಯಾಗಿ ಅಡ್ಡಮತದಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ ಅಡ್ಡಮತದಾನ ಮಾಡಿರುವ ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಅಡ್ಡಮತದಾನ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿ, ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಸತ್ಯಶೋಧನಾ ಸಮಿತಿಯ ವರದಿ ಬಂದ ನಂತರ ಶಾಸಕರ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಲಾಗಿದ್ದು, ಈಗ ವರದಿ ಸಲ್ಲಿಕೆಯಾಗಿದೆ.
ಈ ವರದಿಯನ್ನು ಆಧರಿಸಿ ಪಕ್ಷದ ಹೈಕಮಾಂಡ್ ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಿದೆ.
ಸಿ.ಟಿ.ರವಿ ಹೇಳಿಕೆ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಡ್ಡಮತದಾನಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಅನುಮಾನಾಸ್ಪದವಾಗಿ ಕಂಡು ಬಂದವರ ಪಟ್ಟಿ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಜತೆ ಚರ್ಚಿಸಿ ಸಾಂದರ್ಭಿಕ ಸಾಕ್ಷ್ಯ ಪರಿಗಣಿಸಿ ವರದಿ ತಯಾರಿಸಿ ಕೊಟ್ಟಿದ್ದೇವೆ. ಇದು ಆಂತರಿಕ ತನಿಖಾ ವರದಿ. ಹಾಗಾಗಿ ಹೆಚ್ಚಿನ ಮಾಹಿತಿ ಕೊಡಲು ಆಗಲ್ಲ ಎಂದರು.
ಬಿಜೆಪಿ-ಜೆಡಿಎಸ್‌ನಿಂದ ಒಟ್ಟು ೧೨ ಮತಗಳು ಅಡ್ಡಮತಗಳಾಗಿವೆ. ಬಿಜೆಪಿಯಿಂದ ೪ ಅಡ್ಡಮತದಾನವಾಗಿದ್ದು, ಅದರಲ್ಲಿ ಒಂದು ಮತ ಅಸಿಂಧು ಆಗಿದೆ ಎಂದರು.
ಸಮಿತಿ ವರದಿ ಕೊಟ್ಟಿದೆ. ಉಳಿದಿದ್ದನ್ನು ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ವರದಿಯನ್ನು ರಾಜ್ಯಾಧ್ಯಕ್ಷರು ಹೈಕಮಾಂಡ್‌ಗೆ ಸಲ್ಲಿಕೆ ಮಾಡಬಹುದು ಎಂದು ಸಿ.ಟಿ. ರವಿ ಹೇಳಿದರು.
ಅಡ್ಡಮತದಾನವಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೇರೆ ಪಕ್ಷದ ಅಡ್ಡಮತದಾನದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಅವರು ಹೇಳಿದರು.






















