
ಬೀದರ್: ಜೂ 27: ವಿಶ್ವ ಬಸವ ಧರ್ಮ ಅನುಭವ ಮಂಟಪ, ಬಸವಕಲ್ಯಾಣ ವತಿಯಿಂದ ನೀಡಲಾಗುವ 2026ನೇ ಸಾಲಿನ ಡಾ. ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರಕ್ಕೆ ಬೀದರ್ ನಗರದ ಹಿರಿಯ ಸಮಾಜ ಸೇವಕಿ ಡಾ. ಗುರಮ್ಮ ಸಿದ್ದಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪುರಸ್ಕಾರವನ್ನು ಜೂನ್ 30ರಂದು ಸಂಜೆ 5 ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಪ್ರದಾನ ಮಾಡಲಿದ್ದಾರೆ ಎಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ಕಾರ್ಯದರ್ಶಿ ಡಾ. ಎಸ್.ಬಿ. ದುರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಗುರಮ್ಮ ಸಿದ್ದಾರೆಡ್ಡಿ ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಮಾಜ ಮುಖಿ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತರಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಅವರು ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ಚಟುವಟಿಕೆಗಳು, ಕುಟುಂಬ ಯೋಜನೆ, ಕೈಗಾರಿಕೆ, ನ್ಯಾಯಾಂಗ ಸೇವೆ ಹಾಗೂ ಅಂಗವಿಕಲರ ಪುನರ್ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ವಯಸ್ಕರ ಶಿಕ್ಷಣ, ಆರೋಗ್ಯ ಜಾಗೃತಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿರುವ ಅವರು ಅನೇಕ ಸಂಘ-ಸಂಸ್ಥೆಗಳ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಗುರು-ಲಿಂಗ-ಜಂಗಮ ತತ್ವಗಳ ಮೇಲಿನ ನಿಷ್ಠೆ ಹಾಗೂ ದಾಸೋಹ ಮನೋಭಾವದ ಮೂಲಕ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅವರ ಸಮಗ್ರ ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸನ್ಮಾನ: ಪ್ರಶಸ್ತಿಗೆ ಆಯ್ಕೆಯಾದ ಡಾ.ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ ವತಿಯಿಂದ ಶುಕ್ರವಾರ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಉಪಾಧ್ಯಕ್ಷರಾದ ಮಂಗಲಾ ಭಾಗವತ, ಲೀಲಾವತಿ ಚಾಕೋತೆ, ಕಾರ್ಯದರ್ಶಿ ರಮೇಶ್ ತಿಬಶೆಟ್ಟಿ, ಶಿಕ್ಷಕಿ ಸುಜಾತಾ ಪೂಜಾರಿ, ಆಯುಕ್ತರಾದ ಬಸವರಾಜ ಭಾರಶೆಟ್ಟಿ, ಕಲ್ಯಾಣರಾವ ಚಳಕಾಪುರೆ ಹಾಗೂ ಬಾಬುರಾವ ನಿಂಬೂರೆ ಉಪಸ್ಥಿತರಿದ್ದರು.




















