Home ಮುಖಪುಟ ಸುದ್ದಿ ಬಗೆಹರಿಯದ ಖಾತೆ ಕ್ಯಾತೆ:ಕೃಷ್ಣಬೈರೇಗೌಡ ದೆಹಲಿಗೆ ದೌಡು

ಬಗೆಹರಿಯದ ಖಾತೆ ಕ್ಯಾತೆ:ಕೃಷ್ಣಬೈರೇಗೌಡ ದೆಹಲಿಗೆ ದೌಡು

ಬೆಂಗಳೂರು,ಜೂ,೯-ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿದ್ದ ಸಚಿವ ಸಂಪುಟ ಮತ್ತು ಖಾತೆ ಹಂಚಿಕೆ ಅಸಮಾಧಾನದ ಬೆಂಕಿ ಸದ್ಯಕ್ಕೆ ಆರ ಲಕ್ಷಣಗಳು ಕಾಣಿಸುತ್ತಿಲ್ಲ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಬಂಡಾಯ ಶಮನವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ ಬೆನ್ನಲ್ಲೇ, ಈಗ ಮತ್ತಿಬ್ಬರು ಪ್ರಮುಖ ನಾಯಕರು ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನದ ಕುರಿತು ಅಸಮಾಧಾನಗೊಂಡು ಹೈಕಮಾಂಡ್ ಭೇಟಿಗೆ ದೆಹಲಿಗೆ ದೌಡಾಯಿಸಿದ್ದಾರೆ. ಇದು ಕೈ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರೇ ದೆಹಲಿ ವಿಮಾನ ಹತ್ತಿದ ಪ್ರಮುಖ ನಾಯಕರು. ಅಧಿಕೃತವಾಗಿ ಖಾತೆ ಹಂಚಿಕೆಯಾಗಿದ್ದರೂ ಕೃಷ್ಣ ಬೈರೇಗೌಡ ಅವರು ಇದುವರೆಗೆ ತಮ್ಮ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬೆಂಗಳೂರು ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಎರಡನ್ನೂ ಒಳಪಡಿಸಬೇಕು ಎನ್ನುವುದು ಕೃಷ್ಣ ಬೈರೇಗೌಡ ಅವರ ಪಟ್ಟು. ಈ ಪ್ರಮುಖ ಯೋಜನಾ ಸಂಸ್ಥೆಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣ ಇಲ್ಲದಿದ್ದರೆ, ಕೇವಲ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಅವರ ವಾದವಾಗಿದೆ. ಇದೇ ವಿಷಯವಾಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ, ಶಾಸಕ ರಿಜ್ವಾನ್ ಅರ್ಷದ್ ಕೂಡ ರಾಷ್ಟ್ರ ರಾಜಧಾನಿಯಲ್ಲೇ ಮೊಕ್ಕಾಂ ಹೂಡಿದ್ದು, ಸಚಿವ ಸಂಪುಟದಲ್ಲಿ ತಮಗೂ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಬಿರುಸಿನ ರಾಜಕೀಯ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ ೩ ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮಗೆ ಬೆಂಗಳೂರು ಅಭಿವೃದ್ಧಿ ಇಲಾಖೆ ನೀಡುವುದಾಗಿ ಭರವಸೆ ನೀಡಿ, ಬಳಿಕ ನೀರಾವರಿ ಇಲಾಖೆ ನೀಡಿದ್ದಕ್ಕೆ ಬೇಸತ್ತು ಜೂನ್ ೫ ರಂದು ರಾಜೀನಾಮೆ ನೀಡಿದ್ದರು. ಬಳಿಕ ಆ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಲಾಗಿತ್ತು. ಆದರೆ, ಈಗ ಆ ಖಾತೆ ಪಡೆದ ಸಚಿವರೇ ಅದರ ಅಧಿಕಾರದ ವ್ಯಾಪ್ತಿಯ ಬಗ್ಗೆ ಅಸಮಾಧಾನಗೊಂಡು ಹೈಕಮಾಂಡ್ ಮೆಟ್ಟಿಲೇರಿರುವುದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಸದ್ಯ ಉಂಟಾಗಿರುವ ಈ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆಯ ಗೊಂದಲಗಳು ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದು, ಸಿಎಂ ಶಿವಕುಮಾರ್ ಈ ಹೊಸ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.