Home ಮುಖಪುಟ ಸುದ್ದಿ ಭಾರತದತ್ತ ಎರಡು ಎಲ್‌ಪಿಜಿ ನೌಕೆಗಳು

ಭಾರತದತ್ತ ಎರಡು ಎಲ್‌ಪಿಜಿ ನೌಕೆಗಳು

ಅಹಮದಾಬಾದ್,ಮೇ೧೬: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ತೀವ್ರ ಉದ್ವಿಗ್ನತೆ ಹಾಗೂ ಇಂಧನ ದರಗಳ ಏರಿಕೆಯ ಆತಂಕದ ನಡುವೆಯೇ ಭಾರತದ ಇಂಧನ ಗ್ರಾಹಕರಿಗೆ ಸಮಾಧಾನದ ಸುದ್ಧಿ ಹೊರಬಿದ್ದಿದೆ. ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಹಾಗೂ ಸದ್ಯ ಬಿಕ್ಕಟ್ಟಿಗೆ ಸಿಲುಕಿರುವ ‘ಹೋಜ್ ಜಲಸಂಧಿ’ಯನ್ನು ಯಶಸ್ವಿಯಾಗಿ ದಾಟಿರುವ ಎರಡು ಬೃಹತ್ ಗ್ಯಾಸ್ ಟ್ಯಾಂಕರ್ ನೌಕೆಗಳು ಸುರಕ್ಷಿತವಾಗಿ ಭಾರತದತ್ತ ಮುನ್ನಡೆಯುತ್ತಿವೆ.


ಕಳೆದ ೨೪ ಗಂಟೆಗಳಲ್ಲಿ ಈ ಪ್ರಗತಿ ಕಂಡುಬಂದಿದ್ದು, ಈ ಎರಡೂ ನೌಕೆಗಳು ಒಟ್ಟಾರೆ ೬೬,೩೯೨ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತು ತರುತ್ತಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.


ಮಾರ್ಷಲ್ ಐಲ್ಯಾಂಡ್ಸ್ ಧ್ವಜ ಹೊಂದಿರುವ, ೨೧ ವಿದೇಶಿ ಸಿಬ್ಬಂದಿ ಒಳಗೊಂಡ ‘ಸೈಮಿ’ ಎಲ್‌ಪಿಜಿ ನೌಕೆಯು ಮೇ ೧೩ರಂದು ಹೋರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಕತಾರ್‌ನ ‘ರಾಸ್ ಲಫ್ಲಾನ್’ ಇಂಧನ ಟರ್ಮಿನಲ್‌ನಿಂದ ಸುಮಾರು ೧೯,೯೬೫ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತು ತರುತ್ತಿರುವ ಈ ನೌಕೆಯು ಮೇ ೧೬ರ ಶನಿವಾರದಂದು ಗುಜರಾತ್‌ನ ಕಂಡ್ಲಾದಲ್ಲಿರುವ ದೀನದಯಾಳ್ ಬಂದರನ್ನು ತಲುಪುವ ನಿರೀಕ್ಷೆಯಿದೆ.


ಮಂಗಳೂರಿನತ್ತ ಮುನ್ನಡೆದ ಮತ್ತೊಂದು ನೌಕೆ


ಇದೇ ವೇಳೆ, ವಿಯೆಟ್ನಾಂ ಧ್ವಜದೊಂದಿಗೆ ಸಾಗುತ್ತಿರುವ ‘ಎನ್‌ವಿ ಸನ್‌ಶೈನ್’ ಎಂಬ ಮತ್ತೊಂದು ಬೃಹತ್ ಇಂಧನ ನೌಕೆಯು ಗುರುವಾರ ಬೆಳಗ್ಗೆ ೯:೩೦ ರ ಸುಮಾರಿಗೆ ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ನೌಕೆಯು ಮೇ ೧೮ರ ವೇಳೆಗೆ ಕರ್ನಾಟಕದ ನವ ಮಂಗಳೂರು ಬಂದರನ್ನು (ಓಒPಖಿ) ತಲುಪುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.


ಭಾರತೀಯ ತೈಲ ಸಂಸ್ಥೆಗಳ ಸಮನ್ವಯ


“ಭಾರತಕ್ಕೆ ಇಂಧನ ಹೊತ್ತು ತರುತ್ತಿದ್ದ ಎರಡು ಬೃಹತ್ ಎಲ್‌ಪಿಜಿ ನೌಕೆಗಳು ಹೋರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ನೌಕಾಯಾನ ಸಚಿವಾಲಯದ ಸಂಘಟಿತ ಪ್ರಯತ್ನದಿಂದಾಗಿ ಈ ಸುರಕ್ಷಿತ ಕಾರ್ಯಾಚರಣೆ ಸಾಧ್ಯವಾಗಿದೆ.”
ಮುಖೇಶ್ ಮಂಗಲ್, ಅಪರ ಕಾರ್ಯದರ್ಶಿ, ಬಂದರು ಮತ್ತು ನೌಕಾಯಾನ ಸಚಿವಾಲಯ
ಉದ್ವಿಗ್ನತೆಯ ನಡುವೆಯೂ ಸಾಗಿದ ಕಾರ್ಯಾಚರಣೆ
ಅಮೆರಿಕ-ಇಸ್ರೇಲ್ ಜಂಟಿ ದಾಳಿ ಮತ್ತು ಇರಾನ್ ದೇಶದ ಪ್ರತಿದಾಳಿಗಳ ಬಳಿಕ ಕಳೆದ ಎರಡು ತಿಂಗಳಿನಿಂದ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣವಾಗಿ ಕಂಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ತೈಲ, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿತ್ತು.


ಆದಾಗ್ಯೂ, ಮಾರ್ಚ್ ಆರಂಭದಿಂದ ಇಂದಿನವರೆಗೆ ಭಾರತದ ಧ್ವಜ ಹೊಂದಿರುವ ಒಟ್ಟು ೧೩ ನೌಕೆಗಳು (೧೨ ಎಲ್‌ಪಿಜಿ ಟ್ಯಾಂಕರ್‌ಗಳು ಮತ್ತು ೧ ಕಚ್ಚಾ ತೈಲ ನೌಕೆ) ಭಾರತೀಯ ನೌಕಾಪಡೆಯ ನಿಗಾ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಈ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕನಿಷ್ಠ ೧೨ ಭಾರತೀಯ ಹಡಗುಗಳು ಮತ್ತು ಭಾರತಕ್ಕೆ ಸರಕು ಹೊತ್ತೊಯ್ಯುತ್ತಿದ್ದ ಹಲವು ವಿದೇಶಿ ನೌಕೆಗಳು ಗಲ್ಫ್ ವಲಯದಲ್ಲಿ ಸಿಲುಕಿಕೊಂಡಿದ್ದು, ಅವುಗಳ ಸುರಕ್ಷಿತ ವಾಪಸಾತಿಗೂ ಪ್ರಯತ್ನಗಳು ಮುಂದುವರಿದಿವೆ.