Home ಮುಖಪುಟ ಸುದ್ದಿ ನೀಟ್’ ರದ್ದತಿಗೆ ಆಗ್ರಹ

ನೀಟ್’ ರದ್ದತಿಗೆ ಆಗ್ರಹ

ಬೆಂಗಳೂರು.ಮೇ೧೬: ದೇಶಾದ್ಯಂತ ತೀವ್ರ ವಿವಾದ ಹಾಗೂ ಅಕ್ರಮಗಳ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಯನ್ನು ೨೦೨೬ನೇ ಸಾಲಿನಿಂದ ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಡಾ,ಶರಣಪ್ರಕಾಶ್ ಪಾಟೀಲ್ ಕೇಂದ್ರಕ್ಕೆ ಪತ್ರ ಬರೆದಿದ್ದು ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ರಾಜ್ಯಗಳಿಗೆ ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಕಾನೂನಾತ್ಮಕ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಈ ಹಿಂದೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಅನುಮತಿ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಶಕಗಳಿಂದ ಅತ್ಯಂತ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಶಿಸ್ತಿನ ರೀತಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಿಕೊಂಡು ಬಂದ ಇತಿಹಾಸವನ್ನು ಹೊಂದಿದೆ. ರಾಜ್ಯದ ಹಳೆಯ ಸಿಇಟಿ ವ್ಯವಸ್ಥೆಯು ಗ್ರಾಮೀಣ ಭಾಗದ, ಮಧ್ಯಮ ವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿತ್ತು. ಇದು ಕೇವಲ ಪರೀಕ್ಷೆಯಾಗಿರದೆ, ಶುದ್ಧ ಪ್ರತಿಭೆ ಮತ್ತು ಪರಿಶ್ರಮ ನಂಬಿದ ಯುವಜನರ ಭವಿಷ್ಯ ರೂಪಿಸಿದ ಅತ್ಯಂತ ವಿಶ್ವಾಸಾರ್ಹ ಮಾದರಿಯಾಗಿತ್ತು ಎಂದು ಸರ್ಕಾರ ಪ್ರತಿಪಾದಿಸಿದೆ. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತಿರುವ ‘ನೀಟ್’ ಪರೀಕ್ಷೆಯ ಸುತ್ತ ಗಂಭೀರ ಆತಂಕಗಳು ಸೃಷ್ಟಿಯಾಗಿವೆ ಎಂದು ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಕಲಿ ಅಭ್ಯರ್ಥಿಗಳ ಹಾವಳಿ

ಸಂಘಟಿತ ಅಕ್ರಮ ಜಾಲಗಳು ಮತ್ತು ಅಂಕಗಳ ತಿರುಚುವಿಕೆ ತಾಂತ್ರಿಕ ದೋಷಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ನಿರಂತರ ಅವ್ಯವಸ್ಥೆ.ಈ ಎಲ್ಲಾ ಲೋಪಗಳು ರಾಷ್ಟ್ರಮಟ್ಟದ ಪ್ರಮುಖ ಪರೀಕ್ಷೆಯೊಂದರ ವಿಶ್ವಾಸಾರ್ಹತೆಯ ಮೇಲೆ ಭಾರಿ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿವೆ. ಇತ್ತೀಚಿನ ವಿವಾದಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಮಾನಸಿಕ ಒತ್ತಡ, ಆತಂಕ ಮತ್ತು ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡಿದ್ದು, ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಸಂಪೂರ್ಣವಾಗಿ ವೈಫಲ್ಯ ಕಂಡಿವೆ ಎಂಬ ಅಭಿಪ್ರಾಯ ದೇಶಾದ್ಯಂತ ಬಲವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ರಂಗವು ದೇಶದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದೆ. ಇಂತಹ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಭ್ರಷ್ಟಾಚಾರರಹಿತ ಮತ್ತು ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ಪದೇ ಪದೇ ಅಕ್ರಮಗಳ ಆರೋಪ ಎದುರಿಸುತ್ತಿರುವ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು, ಈಗಾಗಲೇ ನಿಷ್ಠೆಯಿಂದ ಪರೀಕ್ಷೆ ನಡೆಸುತ್ತಿರುವ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವುದು ಸರಿಯಲ್ಲ.

“ರಾಜ್ಯಗಳ ಶಿಕ್ಷಣ ವ್ಯವಸ್ಥೆ, ಭಾಷಾ ವೈವಿಧ್ಯತೆ, ಪಠ್ಯಕ್ರಮ ಮತ್ತು ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳನ್ನು ಆಯಾ ರಾಜ್ಯ ಸರ್ಕಾರಗಳೇ ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲವು. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಪಾತ್ರ ಮತ್ತು ಹಕ್ಕುಗಳನ್ನು ಗೌರವಿಸುವುದು ಸಂವಿಧಾನದ ಫೆಡರಲ್ ವ್ಯವಸ್ಥೆಯ ಆತ್ಮವಾಗಿದೆ” ಎಂದಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕುಗಳನ್ನು ಗೌರವಿಸಿ, ಏಇಂ ನಂತಹ ವಿಶ್ವಾಸಾರ್ಹ ಸಂಸ್ಥೆಗಳ ಮೂಲಕ ಸ್ವತಂತ್ರ ಪರೀಕ್ಷೆ ನಡೆಸಲು ಬಿಡಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳನ್ನು ಪರೀಕ್ಷಾ ಅವ್ಯವಸ್ಥೆಗಳ ಕಾರಣಕ್ಕೆ ಹಾಳುಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸುವ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನರಿಗೆ ನ್ಯಾಯ ಒದಗಿಸುವ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವರು ಕೇಂದ್ರಕ್ಕೆ ಬಲವಾಗಿ ಆಗ್ರಹಿಸಿದ್ದಾರೆ.