
ಕಲಬುರಗಿ,ಮೇ.16-ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪೊಲೀಸರು ಇಂದು ಬೆಳ್ಳಂಬೆಳಿಗ್ಗೆ ಅನಿರೀಕ್ಷಿತವಾಗಿ ರೌಡಿಗಳ ಮನೆ ತಪಾಸಣೆ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದಂತೆ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್ ಅವರ ನೇತೃತ್ವದಲ್ಲಿ ನಗರದ ಎಲ್ಲ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸಪೆಕ್ಟರ್ ಹಾಗೂ ಅಪರಾಧದಳದ ಸಿಬ್ಬಂದಿಗಳು ಇಂದು ಬೆಳ್ಳಂಬೆಳಿಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ 25, ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 32, ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯ 22, ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 24, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ 46, ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ 43, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ 34, ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ 36, ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ 27 ರೌಡಿಗಳು ಸೇರಿ ಒಟ್ಟು 327 ರೌಡಿಗಳ ಮನೆ ತಪಾಸಣೆ ನಡೆಸಿ ನಂತರ ರೌಡಿಗಳನ್ನು ರೌಡಿ ಪರೇಡ್‍ಗೆ ಕರೆತಂದು ರೌಡಿಗಳ ಪರೇಡ್ ನಡೆಸಲಾಯಿತು.
ರೌಡಿಗಳ ಪರೇಡ್ ನಡೆಸಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದರು.
…………
ಹರಿತವಾದ ಆಯುಧ, ರಾಡ್ ಪತ್ತೆ
ನಗರದ 327 ರೌಡಿಗಳ ಮನೆ ತಪಾಸಣೆ ವೇಳೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಅವತಾರ್ ಸಿಂಗ್ ಮನೆಯಲ್ಲಿ ಹರಿತವಾದ ಆಯುಧ ಮತ್ತು ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ತೌಸೀಫ್ ಮನೆಯಲ್ಲಿ ಉದ್ದನೆಯ ರಾಡ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.























