Home ಮುಖಪುಟ ಸುದ್ದಿ ಟಯರ್ ಸ್ಫೋಟ: ಬಸ್ ಗೆ ಬೆಂಕಿ, ೩೬ ಪ್ರಯಾಣಿಕರು ಪಾರು

ಟಯರ್ ಸ್ಫೋಟ: ಬಸ್ ಗೆ ಬೆಂಕಿ, ೩೬ ಪ್ರಯಾಣಿಕರು ಪಾರು

ಹಾಸನ,ಮೇ.೧೭- ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನ ಟೈರ್ ಸ್ಫೋಟಗೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಜಿಲ್ಲೆಯ ಶಾಂತಿಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.


ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ ೩೬ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಲಗೇಜ್ ಹಾಗೂ ಮೊಬೈಲ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ಶಾಂತಿಗ್ರಾಮ ಟೋಲ್ ಗೇಟ್ ಬಳಿ ಘಟನೆ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ಎಲ್ಲರೂ ಪಾರಾಗಿದ್ದಾರೆ.


ಮೊದಲು ಟೈರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಸಣ್ಣದೊಂದು ಶಬ್ದ ಕೇಳಿ ಬಂದಾಗ, ಬಸ್‌ನಲ್ಲಿದ್ದ ಪ್ರಯಾಣಿಕನೋರ್ವ, ಕಿಟಕಿಯ ಪರದೆಯನ್ನು ಸರಿಸಿ ನೋಡಿದಾಗ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಸ್ ಚಾಲಕ ಹಾಗೂ ಎಲ್ಲಾ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಚಾಲಕ ಬಸ್ ರಸ್ತೆ ಬದಿಗೆ ಪಾರ್ಕ್ ಮಾಡಿದ್ದಾರೆ. ಈ ವೇಳೆ ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು, ಅವಸರವಾಗಿ ಕೆಳಗಿಳಿಯುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಅವರ ಲಗೇಜ್ ಮತ್ತು ಕೆಲವು ಬೆಲೆಬಾಳುವ ವಸ್ತುಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಚಾಲಕ ಮತ್ತು ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.


ಅಗ್ನಿಶಾಮಕ ಶಮನ:


ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ಅವರು ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಪ್ರಯಾಣಿಕರನ್ನ ಮತ್ತೊಂದು ಬಸ್‌ನಲ್ಲಿ ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಲಾಯಿತು. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.