Home ಮುಖಪುಟ ಸುದ್ದಿ ಇಬ್ಬರು ಐಸಿಸ್ ಉಗ್ರ ನಾಯಕರ ಹತ್ಯೆ

ಇಬ್ಬರು ಐಸಿಸ್ ಉಗ್ರ ನಾಯಕರ ಹತ್ಯೆ

ವಾಷಿಂಗ್ಟನ್/ನೈಜೀರಿಯಾ, ಮೇ. ೧೬- ಜಾಗತಿಕ ಉಗ್ರ ಸಂಘಟನೆ ಐಸಿಸ್‌ಗೆ ಭಾರೀ ಹೊಡೆತ ಬಿದ್ದಿದ್ದು, ಸಂಘಟನೆಯ ಎರಡನೇ ಪ್ರಮುಖ ನಾಯಕ ಅಬು-ಬಿಲಾಲ್ ಅಲ್-ಮಿನುಕಿಯನ್ನು ಅಮೆರಿಕ ಹಾಗೂ ನೈಜೀರಿಯಾ ಸೇನೆಗಳು ಸಂಯುಕ್ತ ಕಾರ್ಯಾಚರಣೆಯಲ್ಲಿ ಹತ್ಯೆಗೈದಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.


ನೈಜೀರಿಯಾದಲ್ಲಿ ನಡೆದ ಈ ದಾಳಿಯನ್ನು “ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆ” ಎಂದು ಟ್ರಂಪ್ ವಿವರಿಸಿದ್ದಾರೆ. ತಮ್ಮ ನಿರ್ದೇಶನದ ಮೇರೆಗೆ ಅಮೆರಿಕದ ವಿಶೇಷ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿವೆ ಎಂದು ಅವರು ಹೇಳಿದ್ದಾರೆ.

“ಅಬು-ಬಿಲಾಲ್ ಅಲ್-ಮಿನುಕಿ ಇನ್ನು ಮುಂದೆ ಆಫ್ರಿಕಾ ಜನರನ್ನು ಭಯಭೀತಗೊಳಿಸುವುದಿಲ್ಲ. ಅಮೆರಿಕನ್ನರನ್ನು ಗುರಿಯಾಗಿಸಿಕೊಂಡ ಉಗ್ರ ಚಟುವಟಿಕೆಗಳಿಗೆ ಸಹಾಯ ಮಾಡುವ ಅವಕಾಶವೂ ಇಲ್ಲ. ಅವನ ಹತ್ಯೆಯಿಂದ ಐಸಿಸ್‌ನ ಜಾಗತಿಕ ಕಾರ್ಯಾಚರಣೆಗಳು ಬಹು ಮಟ್ಟಿಗೆ ಕುಗ್ಗಿವೆ” ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಮೆರಿಕದ ಗುಪ್ತಚರ ಸಂಸ್ಥೆಗಳು ಆಫ್ರಿಕಾದಲ್ಲಿಯೇ ಅಲ್-ಮಿನುಕಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದವು ಎನ್ನಲಾಗಿದೆ. ಅದರ ಆಧಾರದ ಮೇಲೆ ದಾಳಿ ನಡೆಸಿ ಉಗ್ರ ನಾಯಕನನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಆಫ್ರಿಕಾ ಖಂಡದಲ್ಲಿ ಐಸಿಸ್ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆ, ಈ ಕಾರ್ಯಾಚರಣೆ ಉಗ್ರ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗಿದೆ.