Home ಜಿಲ್ಲೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಉಪ ನಿರ್ದೇಶಕರಿಗೆ ದಂಡ

ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಉಪ ನಿರ್ದೇಶಕರಿಗೆ ದಂಡ

ಕಲ್ಬುರ್ಗಿ: ಜೂ.14:ಸಕಾಲಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿ ಆಯೋಗದ ಆದೇಶ ಪಾಲನೆ ಮಾಡದ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಉಪ ನಿರ್ದೇಶಕರಿಗೆ ಮಾಹಿತಿ ಆಯೋಗ ಕಲ್ಬರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ.ವೆಂಕಟಸಿಂಗ್ ದಂಡ ವಿಧಿಸಿದ್ದಾರೆ.

ರಾಯಚೂರಿನ ರಂಗಲಿಂಗನ ಗೌಡ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿಯನ್ನು ಎರಡು ವರ್ಷವಾದರು ನೀಡದ ಕಾರಣ ಅವರು ಆಯೋಗಕ್ಕೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಆಯೋಗ ರಾಯಚೂರಿನಲ್ಲಿ ಈ ಹಿಂದೇ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಮತಿ ವಿಜಯ ಲಕ್ಷ್ಮೀ ಅವರಿಗೆ 10 ಸಾವಿರ ಹಾಗೂ ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀ ಶಿವಪ್ಪ ಅವರಿಗೆ 5 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

ಮೇಲ್ಮನವಿದಾರರು ಕೋರಿದ ಮಾಹಿತಿ ನೀಡುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ಹಾಗೂ ವಿಚಾರಣೆಗೂ ಹಾಜರಾಗದ ಕಾರಣ ಹಾಲಿ ಶಹಾಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ವಿಜಯಲಕ್ಷ್ಮೀ ಅವರಿಗೆ ಈ ಹಿಂದೇ 5 ಸಾವಿರ ದಂಡ ವಿಧಿಸಿ ಸದ್ರಿ ದಂಡ ಪಾವತಿ ಮಾಡಿ ಮುಂದಿನ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ನಿರ್ಲಕ್ಷ್ಯ ತೋರಿದ ಕಾರಣ ದಂಡದ ಪ್ರಮಾಣವನ್ನು 10 ಸಾವಿರಕ್ಕೆ ಹೆಚ್ಚಿಸಿ ಆಯೋಗ ಆದೇಶ ಮಾಡಿದೆ.

ಅದೇ ರೀತಿ ರಾಯಚೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಪ್ಪ ಅವರಿಗೆ ಮೇಲ್ಮನವಿದಾರರು ಕೋರಿದ ಮಾಹಿತಿ ನೀಡಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಆಯೋಗ ಆದೇಶ ಮಾಡಿತ್ತು. ಆದರೆ ಆಯೋಗದ ಆದೇಶ ಪಾಲನೆ ಮಾಡದೆ ನಿರ್ಲಕ್ಷ್ಯ ತೋರಿದ ಕಾರಣ ಅವರಿಗೂ ಸಹ 5 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ.

ಉಭಯ ಅಧಿಕಾರಿಗಳಿಗೆ ವಿಧಿಸಿದ ದಂಡ ವಸೂಲಿಗೆ ಕ್ರಮ ವಹಿಸಿ ಮುಂದಿನ ವಿಚಾರಣೆ ವೇಳೆ ವರದಿ ನೀಡುವಂತೆ ರಾಯಚೂರು ಮತ್ತು ಯಾದಗಿರ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ, ಶ್ರೀ ಪ್ರವೀಣಕುಮಾರ ಹಾಗೂ ಶ್ರೀ ಚಿದಾನಂದಪ್ಪ ಅವರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 18(3) ರಡಿಯಲ್ಲಿ ನಿರ್ದೇಶಿಸಿದೆ. ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(2) ರಡಿ ಕ್ರಮ ವಹಿಸಲಾಗುವುದೆಂದು ಆದೇಶ ಮಾಡಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.