
ಯಾದಗಿರಿ: ನಗರದ ವನಕೇರಿ ಲೇಔಟ್ ಎದುರು, ಗ್ರಾಮೀಣ ಪೆÇಲೀಸ್ ಠಾಣೆ ಸಮೀಪ ಪಾದಚಾರಿ ರಸ್ತೆಯ ಮೇಲೆಯೇ ಅಪಾಯಕಾರಿ ಸ್ಥಿತಿಯಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ (ಟಿಸಿ) ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ನಗರದ ಪ್ರಮುಖ ರಸ್ತೆಯ ಪಾದಚಾರಿ ಮಾರ್ಗದಲ್ಲೇ ವಿದ್ಯುತ್ ಪರಿವರ್ತಕ ಅಪಾಯಕಾರಿಯಾಗಿ ನಿಂತಿದ್ದರೂ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಯಾವುದೇ ಜೀವ ಬಲಿಯಾದ ಬಳಿಕವೇ ಅಧಿಕಾರಿಗಳು ಎಚ್ಚೆತ್ತು ಪರಿವರ್ತಕ ಸ್ಥಳಾಂತರ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿರುವ ಅವರು, ಚಿಕ್ಕ ಮಕ್ಕಳು, ವೃದ್ಧರು ಹಾಗೂ ಪಶು-ಪ್ರಾಣಿಗಳು ತಿಳಿಯದೆ ಪರಿವರ್ತಕದ ಸಮೀಪಕ್ಕೆ ತೆರಳಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ಟಿಸಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಪಾಯಕಾರಿ ಸ್ಥಳದಲ್ಲಿರುವ ಪರಿವರ್ತಕಕ್ಕೆ ಕನಿಷ್ಠ ಸುರಕ್ಷತಾ ಬೇಲಿ ನಿರ್ಮಿಸಬೇಕಿತ್ತು. ಆದರೆ ಈ ಮೂಲಭೂತ ಸುರಕ್ಷತಾ ಕ್ರಮವನ್ನೂ ಕೈಗೊಳ್ಳದಿರುವುದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಅವರು ದೂರಿದ್ದಾರೆ.
ವನಕೇರಿ ಲೇಔಟ್‍ನಲ್ಲಿರುವ ತರಕಾರಿ ಮಾರುಕಟ್ಟೆಗೆ ಮುಂಜಾನೆ 2 ಗಂಟೆಯಿಂದಲೇ ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರು ಆಗಮಿಸಿ ವಹಿವಾಟು ನಡೆಸುತ್ತಾರೆ. ಅಲ್ಲದೆ ಬೆಳಿಗ್ಗೆ 5-6 ಗಂಟೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವಯೋಮಾನದವರು ವಾಯುವಿಹಾರಕ್ಕಾಗಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಹೀಗಾಗಿ ಪಾದಚಾರಿ ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕದಿಂದ ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪರಿವರ್ತಕವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಅಥವಾ ತಕ್ಷಣ ಸೂಕ್ತ ಸುರಕ್ಷತಾ ಬೇಲಿ ಅಳವಡಿಸಬೇಕು. ಯಾವುದೇ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಭೀಮುನಾಯಕ ಎಚ್ಚರಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಸಿದ್ದಪ್ಪ ಕೂಲೂರು, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪ್ನಳ್ಳಿ, ಅಶೋಕ ನಾಯಕ ಹಾಗೂ ಬಸವರಾಜ ಜಗನ್ನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.






























