Home ಮುಖಪುಟ ಸುದ್ದಿ ಪ್ರಮುಖ ಫ್ಲೈಓವರ್‌ಗಳಲ್ಲಿ ವಾಹನಗಳ ಸಂಚಾರ ನಿಷೇಧ

ಪ್ರಮುಖ ಫ್ಲೈಓವರ್‌ಗಳಲ್ಲಿ ವಾಹನಗಳ ಸಂಚಾರ ನಿಷೇಧ

ಬೆಂಗಳೂರು, ಸೆ. ೪- ನಗರದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ರಾಜಧಾನಿಯ ನಾಲ್ಕು ಪ್ರಮುಖ ಮೇಲ್ಸೇತುವೆಗಳಲ್ಲಿ (ಫ್ಲೈಓವರ್) ವಿವಿಧ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಮೈಸೂರು ರಸ್ತೆ ಬಿಜಿಎಸ್ ಫ್ಲೈಓವರ್ ಹಾಗೂ ಸಿಲ್ಕ್ ಬೋರ್ಡ್, ರಾಗಿಗುಡ್ಡ, ಡಬಲ್ ಡೆಕರ್ ಫ್ಲೈಓವರ್: ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ೨೪ ಗಂಟೆಯೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮೂರು ಚಕ್ರದ ಸರಕು ಆಟೋಗಳು ಸೇರಿದಂತೆ ಇತರ ಸರಕು ಸಾಗಣೆ ವಾಹನಗಳಿಗೆ ಬೆಳಿಗ್ಗೆ ೭ರಿಂದ ೧೧ ಹಾಗೂ ಸಂಜೆ ೪ರಿಂದ ರಾತ್ರಿ ೧೦ರವರೆಗೆ ಪ್ರವೇಶಾವಕಾಶ ಇರುವುದಿಲ್ಲ.

ಪ್ರಯಾಣಿಕರ ಆಟೋ ರಿಕ್ಷಾ ಹಾಗೂ ಮೂರು ಚಕ್ರದ ಸರಕು ಆಟೋಗಳ ಸಂಚಾರವನ್ನು ಇಡೀ ದಿನ ನಿಷೇಧಿಸಲಾಗಿದೆ. ಭಾರಿ ಮತ್ತು ಮಧ್ಯಮ ಮಾದರಿಯ ಸರಕು ವಾಹನಗಳಿಗೆ ಬೆಳಿಗ್ಗೆ ೭ರಿಂದ ೧೧ ಹಾಗೂ ಸಂಜೆ ೪ರಿಂದ ರಾತ್ರಿ ೧೦ರವರೆಗೆ ನಿರ್ಬಂಧ ವಿಧಿಸಲಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಫ್ಲೈಓವರ್ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾವಿಲಾಸ ಜಂಕ್ಷನ್‌ವರೆಗೆ) ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾಗಳ ಸಂಚಾರವನ್ನು ಸಂಪೂರ್ಣವಾಗಿ (೨೪ ಗಂಟೆ) ತಡೆಯಲಾಗಿದೆ. ಎಲ್ಲಾ ರೀತಿಯ ಸರಕು ವಾಹನಗಳಿಗೆ ಬೆಳಿಗ್ಗೆ ೬ರಿಂದ ರಾತ್ರಿ ೧೦ರವರೆಗೆ ಪ್ರವೇಶ ನಿಷೇಧಿಸಲಾಗಿದೆ.

ಈ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಸಿಟಿವಿ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ಕಣ್ಣಾವಲು ಇರಿಸಲಾಗಿದ್ದು, ಸಾರ್ವಜನಿಕರು ಹಾಗೂ ಚಾಲಕರು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.