
ಬೆಂಗಳೂರು, ಅ.೨೩- ಸ್ಟಿಂಗ್ ಆಪರೇಷನ್ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು, ಪ್ರಕರಣದ ಹಿಂದಿರುವ ವ್ಯಕ್ತಿಯನ್ನು ಸಮಗ್ರ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಇದೇ ವೇಳೆ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರೂ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ಬಂದಿದ್ದರು. ಅವರು ಬಂದಿದ್ದರ ಹಿಂದಿನ ಕಾರಣ ನನಗೆ ತಿಳಿದಿಲ್ಲ ಎಂದರು.
ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ನ ರಾಜಕೀಯ ಸಂಚು ಇದೆ ಎಂದು ಹೈಕಮಾಂಡ್ಗೆ ಮಾಹಿತಿ ನೀಡಲಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣವನ್ನು ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬ ಚರ್ಚೆಗಿಂತ, ಇದರ ಹಿಂದೆ ಯಾರಿದ್ದಾರೆ ಎಂಬುದು ಮುಖ್ಯ ಎಂದು ಹೇಳಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಈ ಪ್ರಕರಣವನ್ನು ರೂಪಿಸಲಾಗಿದೆ. ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಪಕ್ಷ ಇಷ್ಟು ಬಲವಾಗಿ ಉಳಿದುಕೊಂಡಿದೆ. ಆದರೆ, ಅವರಿಗೆ ಕಾಂಗ್ರೆಸ್ನಿಂದ ಸಿಗುತ್ತಿರುವ ಗೌರವ ಇದೇನಾ ಎಂದು ಪ್ರಶ್ನಿಸಿದರು.
೨೦೧೧ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಚಾರಗಳನ್ನು ೨೦೨೩ರಲ್ಲಿ ಸ್ಟಿಂಗ್ ರೂಪದಲ್ಲಿ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಹಾಗಿದ್ದರೆ, ಇಷ್ಟು ವರ್ಷಗಳ ಕಾಲ ಈ ವಿಚಾರವನ್ನು ಏಕೆ ಬಹಿರಂಗಪಡಿಸಲಿಲ್ಲ? ಮುಖ್ಯಮಂತ್ರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ? ಸ್ಟಿಂಗ್ ಆಪರೇಷನ್ ನಡೆಸಿದವರು ಕಾಂಗ್ರೆಸ್ನವರೇ ಆಗಿದ್ದರೆ, ಅದರ ಹೊಣೆಯನ್ನು ಜೆಡಿಎಸ್ ಮೇಲೆ ಹೊರಿಸುವುದು ಸರಿಯಲ್ಲ ಎಂದು ಟೀಕಿಸಿದರು. ಈ ಪ್ರಕರಣದ ಕುರಿತು ಹೋಟೆಲ್ನಲ್ಲಿ ಕುಳಿತು ಚರ್ಚೆ ನಡೆಸಿದ್ದರ ಔಚಿತ್ಯವನ್ನೂ ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ ಕುರಿತು ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಲಘುವಾಗಿ ಪರಿಗಣಿಸಬಾರದು. ಸಿದ್ದರಾಮಯ್ಯ ಅವರ ಗಟ್ಟಿಯಾದ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆದಿದೆ. ಸಮರ್ಪಕ ತನಿಖೆ ನಡೆದರೆ ಪ್ರಕರಣದ ಸತ್ಯಾಂಶ ಮುಂದೊಂದು ದಿನ ಹೊರಬರಲಿದೆ ಎಂದರು.
ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿಯನ್ನು ಸಮಗ್ರ ವಿಚಾರಣೆಗೆ ಒಳಪಡಿಸಿ, ಮೊದಲು ಕಾನೂನು ಕ್ರಮ ಕೈಗೊಳ್ಳಬೇಕು. ಆ ವ್ಯಕ್ತಿಯೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ರಾಜಕೀಯ ಭವಿಷ್ಯಕ್ಕೆ ಧಕ್ಕೆ ತರಬಹುದು ಎಂದು ಎಚ್ಚರಿಸಿದರು. ಯತೀಂದ್ರ ಅವರು ತಮ್ಮ ತಂದೆಯ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಹೇಳಿಕೆಯನ್ನು ತಳ್ಳಿಹಾಕುತ್ತಿಲ್ಲ ಎಂದರು.
ದಲಿತ ನಾಯಕರು ಎಂಬ ಕಾರಣಕ್ಕೆ ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ನಾನು ಯಾರ ಜಾತಿಯನ್ನೂ ಕೇಳಿಲ್ಲ; ಅವರ ಕೆಲಸ ಏನು ಎಂಬುದನ್ನು ಮಾತ್ರ ಕೇಳಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರು ಹಿಂದೆ ನಡೆಸಿದ ಹೋರಾಟಗಳನ್ನು ನಾವು ಗಮನಿಸಿದ್ದೇವೆ. ಆದರೆ, ಈಗಿನ ಬೆಳವಣಿಗೆಗಳಲ್ಲಿ ಮಹಿಳೆಯೊಬ್ಬರನ್ನು ಮುಂದಿಟ್ಟುಕೊಂಡು ಯಾವ ಉದ್ದೇಶ ಸಾಧಿಸಲು ಹೊರಟಿದ್ದೀರಿ? ಈ ಪ್ರಕರಣದಲ್ಲಿ ಒಂದರ ಹಿಂದೆ ಮತ್ತೊಂದು ಬೆಳವಣಿಗೆಗಳಿಗೆ ಅವಕಾಶ ನೀಡುತ್ತಿರುವುದೇಕೆ? ಸಂಬಂಧಪಟ್ಟ ವ್ಯಕ್ತಿ ರಾಜಾರೋಷವಾಗಿ ಓಡಾಡಲು ಅವಕಾಶ ನೀಡಿರುವುದೇಕೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದರಲ್ಲಿ ಅವರದೇ ಆದ ಕೊಡುಗೆ ಇದೆ. ಈಗ ಗೃಹ ಸಚಿವರು ಅಧಿಕಾರಿಗಳನ್ನು ಬಳಸಿಕೊಂಡು ರಾಜಕೀಯವಾಗಿ ಯಾರನ್ನಾದರೂ ಗುರಿಯಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕರಣವನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ ತನಿಖೆ ದಿಕ್ಕು ತಪ್ಪುವ ಸಾಧ್ಯತೆಯಿದೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.























