
ಹಾಸನ,ಜೂ.೧೫- ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಹೇಮಾವತಿ ನದಿ ಹಿನ್ನೀರಿನಲ್ಲಿ ಶೆಟ್ಟಿಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಚರಣ್ (೨೦), ಮಿಲನ್ (೨೩) ಮತ್ತು ಮಣಿಕಂಠ (೨೦) ಮೃತಪಟ್ಟವರು.
ಎರಡು ದಿನ ರಜೆ ಇದ್ದರಿಂದ ಬೆಂಗಳೂರಿನಿಂದ ೧೦ ಯುವಕರ ತಂಡ ಟಿಟಿ ವಾಹನದಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಹಿಂದಿರುಗುವಾಗ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೋಗದೆ ಹೇಮಾವತಿ ಹಿನ್ನೀರಿನಲ್ಲಿ ಇರುವ ರಂಗನಾಥ ಸ್ವಾಮಿ ದೇವಾಲಯದ ದರ್ಶನಕ್ಕೆ ಬಂದಿದ್ದರು. ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ತೆರಳಿದ್ದರು. ಸಾಯಂಕಾಲದ ವೇಳೆ ಯುವಕರು ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ.
ಈಜು ಬರದಿದ್ದ ಯುವಕರು ಸ್ನಾನ ಮಾಡಿ ಬಂದಿದ್ದರು. ಆದರೆ ನೀರಿನ ಆಳ ತಿಳಿಯದೆ ಇಳಿದ ಮೂವರು ನೀರಲ್ಲಿ ಮುಳುಗಿದ್ದಾರೆ. ನದಿ ತೀರದಲ್ಲಿದ್ದ ಉಳಿದ ಸ್ನೇಹಿತರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಭಾನುವಾರದ ಹಿನ್ನೆಲೆ ಮತ್ತು ನಿರ್ಜನ ಪ್ರದೇಶವಾದ್ದರಿಂದ ಸಕಾಲಕ್ಕೆ ಯಾವುದೇ ಸಹಾಯ ಸಿಗಲಿಲ್ಲ. ಹೀಗಾಗಿ ಗೆಳೆಯರ ಕಣ್ಣೆದುರೆ ಮೂವರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಗೊರೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಈಜುಗಾರರ ನೆರವಿನಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




























