
ಬೀದರ್:ಮೇ.20: ರಾಜ್ಯ ಕಾಂಗ್ರೆಸ್ ಸರ್ಕಾರ ಮೇ 20 ರಂದು ಮೂರು ವರ್ಷ ಪೂರೈಸುತ್ತಿದೆ. ಈ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯ ದಿವಾಳಿ ಎದ್ದಿದೆ. ಅಭಿವೃದ್ಧಿ ಹಳ್ಳ ಹಿಡಿದಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಖಾಲಿ ಖಜಾನೆ ಭರ್ತಿಗೆ ಬೆಲೆಯೇರಿಕೆ, ತೆರಿಗೆ ಹೆಚ್ಚಳದ ಭಾರ ಹಾಕಿ, ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುರ್ಬರ ಮಾಡಿದೆ. ಇಂಥದ್ದರಲ್ಲಿ ಸರ್ಕಾರ ಸಾರ್ಥಕ, ಸಾಧನಾ ಸಮಾವೇಶ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಕಿಡಿಕಾರಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕೆಟ್ಟ, ಭ್ರಷ್ಟ, ಜನ ವಿರೋಧಿ, ರೈತ ವಿರೋಧಿ ಹಾಗೂ ಬಡವರ ವಿರೋಧಿ ಸರ್ಕಾರ ನೋಡಲಾಗುತ್ತಿದೆ. ಆಡಳಿತದ ಎಲ್ಲ ರಂಗಗಳಲ್ಲೂ ಈ ಸರ್ಕಾರ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಜನರ ವಿಶೇಷವಾಗಿ ಬಡವರ, ಹಿಂದುಳಿದವರ, ರೈತರ, ಮಧ್ಯಮ ವರ್ಗದವರ ಬದುಕನ್ನೇ ಈ ಸರ್ಕಾರ ಭಾರ ಮಾಡಿದೆ. ಮೂರು ವರ್ಷದಲ್ಲಿ 300ಕ್ಕೂ ಹೆಚ್ಚು ವೈಫಲ್ಯಗಳ ದೊಡ್ಡ ಪಟ್ಟಿಯೇ ಇದೆ. ಈ ಸರ್ಕಾರಕ್ಕೆ ಸಾಧನೆ ಸಮಾವೇಶ ಮಾಡುವ ನೈತಿಕತೆಯೇ ಇಲ್ಲ ಎಂದು ಜಂಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರ್ಕಾರ ಸತತ ಹೆಣಗಾಡುತ್ತಿದೆ. ಖಜಾನೆ ಬರಿದಾದ ಕಾರಣ ಸರ್ಕಾರ ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿಗೇರಿದೆ. ಕಳೆದ ಒಂದೇ ವರ್ಷದಲ್ಲಿ 1.16 ಲಕ್ಷ ಕೋಟಿ ಸಾಲ ಮಾಡಲಾಗಿದೆ.
ಅಭಿವೃದ್ಧಿ ಕೆಲಸ ಅಕ್ಷರಶಃ ಸ್ಥಗಿತವಾಗಿವೆ. ಹಳೆ ಯೋಜನೆಗಳು ಹಳಿ ತಪ್ಪಿದರೆ, ಹೊಸ ಯೋಜನೆಗಳಿಗೆ ಬರೀ ಕಲ್ಲು ಹಾಕಿ, ಶಂಕುಸ್ಥಾಪನೆ ಮಾಡಿ ಕೈ ತೊಳೆದುಕೊಳ್ಳಲಾಗುತ್ತಿದೆ.
ಸರ್ಕಾರಿ ನೌಕರರಿಗೂ ಮಾಸಿಕ ವೇತನ ಸರಿಯಾಗಿ ಕೊಡಲು ಆಗುತ್ತಿಲ್ಲ. ಕೆಲ ಇಲಾಖೆಯವರು ವೇತನಕ್ಕಾಗಿ ಎರಡ್ಮೂರು ತಿಂಗಳು ಅಲೆಯುವ ಪರಿಸ್ಥಿತಿ ಬಂದಿದೆ. ನೀರಾವರಿ ಯೋಜನೆಗಳಿಗೆ ಹಣವಿಲ್ಲದೆ ಸೊರಗುತ್ತಿವೆ. ಹಣ ಹೊಂದಿಸಲು ಸರ್ಕಾರ ಬೆಲೆ ಏರಿಕೆ ಮೊರೆಯಿಟ್ಟಿದೆ. ಈ ಸರ್ಕಾರ ಬಂದ ಮೇಲೆ ಕೇವಲ ಬೆಲೆ ಏರಿಕೆ, ಬೆಲೆ ಏರಿಕೆ, ಬೆಲೆ ಏರಿಕೆಯೇ ನಡೆದಿದೆ. ದಿನ ಬೆಳಗಾದರೆ ಬೆಲೆಯೇರಿಕೆಯ ಬಿಸಿ ಎಂಬ ಸುದ್ದಿ ನೋಡುವಂತಾಗಿದೆ. ಈ ಸರ್ಕಾರದ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ ಎಂದು ದೂರಿದ್ದಾರೆ.
ಶಕ್ತಿ ಯೋಜನೆ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಒಂದು ಟೈರ್ ಬದಲಿಸಬೇಕಾದರೆ ವಾರಗಟ್ಟಲೇ ಕಾಯುವ ಸ್ಥಿತಿ ಬಂದಿದೆ. 8-10 ಲಕ್ಷ ಕಿಮೀ ಓಡಿ, ಗುಜರಿಗೆ ಸೇರಬೇಕಾದ ಸಾವಿರಾರು ಬಸ್ ಗಳು ಹಾಗೆಯೇ ಓಡಿಸುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ಗೃಹಜ್ಯೋತಿ ಯೋಜನೆ ಎಲ್ಲ ವಿದ್ಯುತ್ ಸಂಸ್ಥೆಗಳನ್ನೇ ಕತ್ತಲಲ್ಲಿ ಮುಳುಗಿಸಿದೆ. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಕಾಂಗ್ರೆಸ್ ಸಚಿವ, ಶಾಸಕರೇ ಗ್ಯಾರಂಟಿ ಬಗ್ಗೆ ತಗಾದೆ ಎತ್ತಿ ಈ ಯೋಜನೆ ಬಂದ್ ಮಾಡಿದರೆ ಬೆಸ್ಟ್ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.




















