Home ಜಿಲ್ಲೆ ಬೆಂಗಳೂರು ಮನಸ್ಸನ್ನು ಗೆದ್ದವರೇ ಮಹಾತ್ಮರು – ಜಯರಾಮ್

ಮನಸ್ಸನ್ನು ಗೆದ್ದವರೇ ಮಹಾತ್ಮರು – ಜಯರಾಮ್

ಕೋಲಾರ, ಜು,೩೦- ಜ್ಞಾನಕ್ಕೂ, ಕ್ರಿಯೆಗೂ ಸಾಧನವಾಗಿರುವುದು ಮನಸ್ಸು. ಮನಸ್ಸನ್ನು ಗೆದ್ದವರೇ ಮಹಾತ್ಮರು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.


ಕೈವಾರದ ಯೋಗಿ ನಾರೇಯಣ ಮಠದಲ್ಲಿ ನಡೆದ ಗುರುಪೂರ್ಣಮಿ ಪ್ರಯುಕ್ತ ನಡೆದ ಗುರುಪೂಜಾ ಸಮಾರಂಭದಲ್ಲಿ ಗುರುಸಂದೇಶವನ್ನು ನೀಡುತ್ತಾ ಮಾತನಾಡಿದರು.


ಸ್ವಪ್ನದಲ್ಲಿ ನೋಡುವ ಪದಾರ್ಥಗಳೊಂದಿಗೆ ನೋಡುವವರಿಗೆ ಯಾವ ಸಂಬಂಧವೂ ಇರುವುದಿಲ್ಲ. ಹಾಗೆಯೇ ಶಾರೀರಿಕವಾಗಿ ಆಗುವ ಅನುಭವಗಳಿಗೂ ಆತ್ಮಕ್ಕೂ ಯಾವ ಸಂಬಂಧವೂ ಇರುವುದಿಲ್ಲ.

ಭೋಗವಿಷಯಗಳ ಬಗ್ಗೆ ಮನಸ್ಸಿನ ನಂಟು ಕಡಿಮೆ ಮಾಡಿಕೊಳ್ಳಬೇಕು. ಈ ರೀತಿ ಮನಸ್ಸನ್ನು ಹತೋಟಿಗೆ ತಂದು ಗೆದ್ದರೆ ಮಹಾತ್ಮರಾಗುತ್ತಾರೆ. ಯಾವುದರ ಬಗ್ಗೆಯೂ ಭಯವು ಇರಬಾರದು. ಭಯವನ್ನು ಗೆದ್ದರೆ ಬ್ರಹ್ಮಜ್ಞಾನಿ. ದೇಹದಲ್ಲೇ ಇದ್ದರೂ ದೇಹಾತ್ಮಭಾವವನ್ನು ಬಿಟ್ಟು ಬ್ರಹ್ಮಾನಂದದಲ್ಲಿ ಮಗ್ನರಾಗಿರುವವರು ತತ್ತ್ವವೆತ್ತ ಎಂದರು.


ದ್ವಾಪರಯುಗದಲ್ಲಿ ಕಾರುಣ್ಯ ಗುರುಗಳಾದ ವ್ಯಾಸಮಹರ್ಷಿಗಳು ಕಾಲಜ್ಞಾನವನ್ನು ಬರೆದಿದ್ದಾರೆ. ಕಲಿಯುಗದಲ್ಲಿ ಕಾರುಣ್ಯಗುರುಗಳಾದ ಕೈವಾರ ತಾತಯ್ಯನವರು ಕಾಲಜ್ಞಾನವನ್ನು ಬರೆದಿದ್ದಾರೆ. ಇವರಿಬ್ಬರೂ ಪರಮಾತ್ಮನ ಸ್ವರೂಪರೇ ಆಗಿದ್ದಾರೆ. ಗುರುವಿನ ಉಪದೇಶದಿಂದ ಆತ್ಮಪ್ರಕಾಶವಾಗುತ್ತದೆ. ನಿಷ್ಕಾಮವಾಗಿ ಗುರುವಿಗೆ ಶರಣಾಗಬೇಕು. ಮಾನವ ಜನ್ಮದ ಮಹತ್ವವನ್ನು ಕೈವಾರ ತಾತಯ್ಯನವರು ತಮ್ಮ ತತ್ವಗಳಲ್ಲಿ ತಿಳಿಸಿದ್ದಾರೆ. ಸದಾಕಾಲ ಆತ್ಮದಲ್ಲಿ ಗುರುವಿನ ಚಿಂತನೆಯನ್ನು ಮಾಡಬೇಕು. ಆತ್ಮದಲ್ಲಿ ಪರಮಾತ್ಮನ ಪುಣ್ಯವಾದ ನಾಮಸ್ಮರಣೆಯನ್ನು ಮಾಡಬೇಕು. ಇದರಿಂದ ಎಷ್ಟೋ ಸಾವಿರಾರು ವರ್ಷಗಳಿಂದ ಇರುವ ಹುಟ್ಟುಸಾವಿನ ಚಕ್ರವನ್ನೇ ನಾಶ ಮಾಡಿ, ಭವಹರ ಮಾಡುವ ಶಕ್ತಿ ನಾಮಸ್ಮರಣೆಗೆ ಇದೆ. ಸಾತ್ವಿಕವಾದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.


ಗುರುಪೂಜೆಯ ಅಂಗವಾಗಿ ಗೋಷ್ಠಿ ಗಾಯನವನ್ನು ಶಾಸ್ತ್ರಿಯವಾಗಿ ವಿದ್ವಾಂಸರುಗಳಿಂದ ನಡೆಯಿತು. ಗುರುಪೌರ್ಣಮಿ ಪ್ರಯುಕ್ತ ಶ್ರೀ ಯೋಗಿ ನಾರೇಯಣ ತಾತಯ್ಯನವರಿಗೆ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆ ಸಮರ್ಪಣೆ ಮಾಡಲಾಯಿತು.


ಗುರುಪೂರ್ಣಮಿ ಪ್ರಯುಕ್ತ ಬೆಳಗಿನಿಂದಲೇ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಕಂರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ನಂತರ ನಡೆದ ಗುರುಪೂಜಾ ಮಹೋತ್ಸವದಲ್ಲಿ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕವನ್ನು ಸಲ್ಲಿಸಲಾಯಿತು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಏಳನೀರು ಮತ್ತು ಹರಿಶಿನ ಮತ್ತು ಕುಂಕುಮ, ವಿಭೂತಿ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕವನ್ನು ಸಮರ್ಪಿಸಲಾಯಿತು. ರಾಜೋಪಚಾರ, ಅಷ್ಟಾವಧಾನ ಸೇವೆ ಸಮರ್ಪಣೆ ಮಾಡಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಆಂಧ್ರ, ತಮಿಳು ನಾಡು ಇತರೆ ಸ್ಥಳಗಳಿಂದ ಬಂದಿದ್ದ ಸಹಸ್ರಾರು ಭಕ್ತಾದಿಗಳು ಗುರುಪೂಜೆ ಯಲ್ಲಿ ಭಾಗವಹಿಸಿದ್ದರು. ವೇದಿಕೆಯನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸಂಕೀರ್ತನಾ ಪ್ರದಕ್ಷಿಣೆ ನಡೆಸಲಾಯಿತು. ನಾಡಿನ ಹಿರಿಯ ಸಾಹಿತಿ, ಕೈವಾರ ಕ್ಷೇತ್ರದಿಂದ ಪ್ರಕಟವಾಗುವ ಮಲ್ಲಾರ ಮಾಸ ಪತ್ರಿಕೆಯ ನಿರ್ವಾಹಕ ಸಂಪಾದಕರಾದ ಡಾ||ಬಾಬು ಕೃಷ್ಣಮೂರ್ತಿ ರವರಿಗೆ ಸದ್ಗುರು ಶ್ರೀಯೋಗಿನಾರೇಯಣ ಮಠದ ವತಿಯಿಂದ ನಾರೇಯಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.