Home ಜಿಲ್ಲೆ ಬೆಂಗಳೂರು ತಮಿಳುನಾಡಿಗೆ ನೀರು ಬಿಡುವ ಆದೇಶಕ್ಕೆ ಕನ್ನಡಿಗರ ಆಕ್ರೋಶ

ತಮಿಳುನಾಡಿಗೆ ನೀರು ಬಿಡುವ ಆದೇಶಕ್ಕೆ ಕನ್ನಡಿಗರ ಆಕ್ರೋಶ

ಬೆಂಗಳೂರು, ಜು. ೩೦- ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಕಾವೇರಿ ನಮ್ಮದು, ನಮ್ಮ ನೀರು ನಮ್ಮ ಹಕ್ಕು ಘೋಷಣೆಗಳನ್ನು ಕೂಗಿ ಪ್ರತಿಭಟಿಸಿ ನೀರು ಬಿಡುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಬರ ಆವರಿಸಿದ್ದು, ಜಲಾಶಯಗಳು ನೀರಿಲ್ಲದೆ ಒಣಗಿ ಹೋಗಿವೆ. ಬೆಳೆಗಳಿಗೆ ನೀರಿಲ್ಲ. ಜನಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಮಿತಿ ಪ್ರತಿ ದಿನ ಕಾವೇರಿಯಿಂದ ಮೂರುವರೆ ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ನೀಡಿರುವ ಆದೇಶ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.


ನಗರದಲ್ಲಿ ಕರವೇ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ. ಮಳೆಯಿಲ್ಲದೆ ಜಲಾಶಯ ಡೆಡ್ ಸ್ಟೋರೆಜ್ ತಲುಪಿದೆ. ಈ ಭಾಗದ ರೈತರಿಗೆ ನೀರಲ್ಲದೆ ಬೆಳೆ ಹಾಕಬೇಡಿ ಎಂದು ಸೂಚನೆ ನೀಡಲಾಗಿದೆ.


ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿಗೆ ಮಾತ್ರ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ೪.೫೦ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಮಾಡಿರುವ ಆದೇಶ ಖಂಡನೀಯ ಎಂದು ಅವರು ಸಮಿತಿ ವಿರುದ್ಧ ಗುಡುಗಿದರು.


ಪ್ರತಿಭಟನೆಯಲ್ಲಿ ಪ್ರಸನ್ನ ಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.