Home ಜಿಲ್ಲೆ ತುಮಕೂರು ದೇವರಾಜ ಅರಸು ತತ್ವಾದರ್ಶ ಅನುಕರಣೀಯ

ದೇವರಾಜ ಅರಸು ತತ್ವಾದರ್ಶ ಅನುಕರಣೀಯ

ಗುಬ್ಬಿ, ಆ. ೨೨- ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರಿಂದಲೇ ಹಿಂದುಳಿದ ವರ್ಗಗಳ ಹರಿಕಾರರಾಗಲು ಸಾಧ್ಯವಾಯಿತು ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.


ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಅರಸು ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.


ಅರಸು ಅವರ ದಿಟ್ಟತನ, ಹಿಂದುಳಿದ ವರ್ಗಗಳ ಬಗ್ಗೆ ಇಟ್ಟಿದ್ದ ಕಾಳಜಿ, ಆಡಳಿತ ವೈಖರಿ ಇಂದಿಗೂ ಸ್ಮರಣೀಯ. ಅವರ ಆದರ್ಶ, ತತ್ವ, ಸಿದ್ಧಾಂತಗಳು ಇಂದಿಗೂ ಮಾರ್ಗದರ್ಶಕ ಎಂದು ಹೇಳಿದರು.


ಅಲೆಮಾರಿ ಮತ್ತು ಅರೆ ಅಲೆಮಾರಿ ಸಲಹಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ದಿಟ್ಟ ನಿರ್ಧಾರ ಹಾಗೂ ಸಮಾಜಮುಖಿ ಚಿಂತನೆಗಳು ವ್ಯಕ್ತಿಯನ್ನು ಮೇರು ಮಟ್ಟಕ್ಕೆ ಕೊಂಡೊಯ್ಯುವವು ಎನ್ನುವುದಕ್ಕೆ ಅರಸು ಆದರ್ಶಪ್ರಾಯ ಎಂದರು.


ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಓದಿದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.


ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಪ.ಪಂ. ಮುಖ್ಯಾಧಿಕಾರಿ ಮಂಜುಳಾ ದೇವಿ, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರ, ಎಇಇ ಚಂದ್ರಶೇಖರ್, ಅರಸು ಸಮಾಜದ ಅಧ್ಯಕ್ಷ ಕಾಂತರಾಜು, ಮುಖಂಡರಾದ ಶ್ರೀನಿವಾಸ್, ಪುರುಷೋತ್ತಮ, ಅಧಿಕಾರಿಗಳು, ಭಾಗವಹಿಸಿದ್ದರು.