
ಕಾಳಗಿ : ಜನರು ಸರಕಾರದ ಬಳಿಗೆ ಬರುವ ಬದಲು, ಸರಕಾರವೇ ಜನರಿದ್ದಲ್ಲಿ ತೆರಳಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶ ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.
ತಾಲೂಕಿನ ಕೊಡ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರ ಹಾಗೂ ಜನರ ನಡುವಿನ ಸಂಬಂಧ ಯಾವಾಗಲು ಗಟ್ಟಿಯಾಗಿರಬೇಕು. ಸರಕಾರ ಇರುವುದೇ ಜನರ ಸೇವೆಗಳನ್ನು ಮಾಡಲು. ಸರಕಾರದ ಸೇವೆ ಪಡೆಯಲು ಜನ ಕಚೇರಿಗಳಿಗೆ ವಾರ, ತಿಂಗಳುಗಟ್ಟಲೆ ಅಲೆಯುವ ಪರಿಸ್ಥಿತಿ ಯನ್ನು ತಪ್ಪಿಸಿ, ಅವರ ಅಹವಾಲುಗಳಿಗೆ ಸ್ಪಂದಿಸಲು ಪ್ರಜಾಸೇವೆ ಇಲಾಖೆಯ ಮೂಲಕ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.
ಜನರು ಯಾವ ಸಮಸ್ಯೆಗಳಿಂದ ಹೈರಾಣಗಿದ್ದಾರೆ, ಅವರ ಪರಿಸ್ಥಿತಿಯನ್ನು ಅರಿತು ಅದನ್ನು ಮೌಲ್ಯಮಾಪನ ಮಾಡಲು ಪಾಲಿಸಿ ತರುವುದೇ ಸರಕಾರದ ಕೆಲಸ ಎಂದರು.
ತಹಸೀಲ್ದಾರ್ ಪೃಥ್ವಿರಾಜ ಪಾಟೀಲ, ತಾ.ಪಂ ಇಓ ಬಸಲಿಂಗಪ್ಪ ಡಿಗ್ಗಿ, ಗ್ರೇಡ್ -2 ತಹಸೀಲ್ದಾರ್ ರಾಜೇಶ್ವರಿ, ಜೇಸ್ಕಾಂ ಎಇಇ ಇಲಿಯಾಸ್ ಅಹಮ್ಮದ್, ಶಿವಶರಣಪ್ಪ ಉಕ್ಕಲಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರಾದ ಬಿಜೆಪಿ ಮಂಡಲದ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಪ್ರಶಾಂತ ಕದಂ, ರಮೇಶ ಕಿಟ್ಟದ, ಶರಣು ಚಂದಾ, ಪುರುಷೋತ್ತಮ್ ಗುತ್ತೇದಾರ, ಸುಂದರ ಸಾಗರ, ಮೋಹನ ಚಿನ್ನ, ವೀರಣ್ಣ ಗಂಗಾಣಿ, ಖತಲಪ್ಪ ಅಂಕನ್, ಇಂದ್ರಜೀತ ಕಟ್ಟಿಮನಿ ಸೇರಿದಂತೆ ತಾಲೂಕಿನ ಜನರು ಉಪಸ್ಥಿತರಿದ್ದರು.





























