Home ಜಿಲ್ಲೆ ಕಲಬುರಗಿ ಕೆರೆಗಳಿಗೆ ನೀರು ಹರಿಸುವ ರೈತರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ; ಅರುಣಕುಮಾರ ಪಾಟೀಲ

ಕೆರೆಗಳಿಗೆ ನೀರು ಹರಿಸುವ ರೈತರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ; ಅರುಣಕುಮಾರ ಪಾಟೀಲ

ಅಫಜಲಪುರ ; ಭೀಮಾ ನದಿ ನೀರನ್ನು ಕೆರೆಗಳಿಗೆ ಹರಿಸುವುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು, ಇದೀಗ ಬಳ್ಳೂರಗಿ ಕೆರೆಗೆ ನೀರು ಹರಿಸುವ ಮೂಲಕ ರೈತರ ಬೇಡಿಕೆ ಈಡೇಸಲಾಗಿದೆ ಎಂದು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ ಹೇಳಿದರು.

ತಾಲೂಕಿನ ರೈತರ ಬಹುದಿನಗಳ ಕನಸಾಗಿದ್ದ ಭೀಮಾ ನದಿ ನೀರನ್ನು ಕೆರೆಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತಷ್ಟು ವೇಗ ದೊರೆತಿದ್ದು, ?314 ಕೋಟಿ ವೆಚ್ಚದಲ್ಲಿ ಅಫಜಲಪುರ ಮತಕ್ಷೇತ್ರದ 10 ಕೆರೆಗಳನ್ನು ತುಂಬಿಸುವ ಯೋಜನೆಯಡಿ ಎರಡನೇ ಕೆರೆಯಾದ ಬಳ್ಳೂರಗಿ ಕೆರೆಗೆ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೆಗೆ ನೀರು ಸಂಗ್ರಹವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ. ಬರಪೀಡಿತ ಅಫಜಲಪುರ ಭಾಗದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಉಳಿದ ಕೆರೆಗಳಿಗೂ ಹಂತ ಹಂತವಾಗಿ ನೀರು ಹರಿಸುವ ಮೂಲಕ ಕ್ಷೇತ್ರದ ನೀರಾವರಿ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಅರುಣ ಪಾಟೀಲ ತಿಳಿಸಿದರು.

ಆಳಂದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಸತತ ಬರಗಾಲದಿಂದ ಬಳಲುತ್ತಿರುವ ಆಳಂದ ಹಾಗೂ ಅಫಜಲಪುರ ತಾಲೂಕಿನ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೆರೆ ತುಂಬಿಸುವ ಯೋಜನೆ ರೂಪಿಸಿದೆ. 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗೆ ಮಂಜೂರಾತಿ ನೀಡಿದ್ದರು. ಆರಂಭದಲ್ಲಿ ?118 ಕೋಟಿ ಅನುದಾನ ನೀಡಲಾಗಿತ್ತು. ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಿ ಪ್ರಸ್ತುತ ಸುಮಾರು ?450 ಕೋಟಿಗೆ ತಲುಪಿದೆ. ಯೋಜನೆಯಡಿ ಒಟ್ಟು 36 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸೂರತ್-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಬಡದಾಳ ಸಮೀಪ ಹಾನಿಗೊಂಡ ಅಮರ್ಜಾ ಜಲಾಶಯದ ಪೈಪ್‍ಲೈನ್ ಕುರಿತು ಮಾಹಿತಿ ನೀಡಿ, ಸೆಪ್ಟೆಂಬರ್ 10ರೊಳಗೆ ದುರಸ್ತಿ ಮಾಡುವುದಾಗಿ ಹೆದ್ದಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಗಾಗಲೇ ಪೈಪ್ ಜೋಡಣೆ ಕಾರ್ಯ ಆರಂಭವಾಗಿದೆ ಎಂದು ಬಿ.ಆರ್.ಪಾಟೀಲ ಹೇಳಿದರು

ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣವೀರಯ್ಯ ಮಠಪತಿ, ಸುರೇಶ್ ಗದಗಯ್ಯ ಮಠಪತಿ, ಶ್ರೀಮಂತ ಪಾಟೀಲ, ಶರಣಬಸಪ್ಪ ಪಾಟೀಲ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದರು.