Home ಜಿಲ್ಲೆ ತುಮಕೂರು ಸರ್ಕಾರದಲ್ಲಿ ನನಗೆ ಸ್ಥಾನ ನೀಡೋದು ಸಿಎಂ ವಿವೇಚನೆಗೆ ಬಿಟ್ಟದ್ದು: ಕೆಎಸ್‌ಕೆ

ಸರ್ಕಾರದಲ್ಲಿ ನನಗೆ ಸ್ಥಾನ ನೀಡೋದು ಸಿಎಂ ವಿವೇಚನೆಗೆ ಬಿಟ್ಟದ್ದು: ಕೆಎಸ್‌ಕೆ

ಚಿಕ್ಕನಾಯಕನಹಳ್ಳಿ, ಆ. ೨೨- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ರಾಜ್ಯಮಟ್ಟದಲ್ಲಿ ನನಗೆ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹೇಳಿದರು.


ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಪಂಚಗ್ಯಾರಂಟಿ ಯೋಜನೆಯ ಮೂರನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.


ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ಯೋಜನೆಯನ್ನು ನೀಡುವಲ್ಲಿ ಮೂರನೇ ವರ್ಷ ಯಶಸ್ವಿಯ ಸಾಧನೆಯಾಗಿದೆ ಎಂದರು.


ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುವವರು ಮಾಡಲಿ, ಆದರೆ ಸರ್ಕಾರ ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ನೀಡುತ್ತಿದೆ. ಮರಣ ಹೊಂದಿರುವ ಹೆಸರಿನಲ್ಲಿ ಈ ಯೋಜನೆಯ ಹಣ ಸೇರಿರುವುದನ್ನು ಸರ್ಕಾರ ಪರಿಶೀಲಿಸಿ ಅಂತಹ ಖಾತೆಯಿಂದ ವಾಪಸ್ಸು ಪಡೆಯಲಿದೆ. ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಗೃಹಲಕ್ಷ್ಮಿ ಯೋಜನೆಯೊಂದರಿಂದಲೇ ತಾಲ್ಲೂಕಿಗೆ ೩೦೦ ಕೋಟಿಗೂ ಅಧಿಕ ಹಣ ಬಂದಿದೆ. ಒಟ್ಟಾರೆಯಾಗಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ತಾಲ್ಲೂಕಿಗೆ ಬರೋಬ್ಬರಿ ೭೦೦ ಕೋಟಿ ರೂ. ಅನುದಾನ ಹರಿದು ಬಂದಿದ್ದು, ಇದು ಜನಸಾಮಾನ್ಯರ ಜೀವನ ಮಟ್ಟವನ್ನು ಗಣನೀಯವಾಗಿ ಸುಧಾರಿಸಿದೆ ಎಂದರು.


ಡಿಕೆಶಿಯವರ ವಿಶ್ವಾಸದಲ್ಲಿ ತಾವಿದ್ದೀರ? ಸರ್ಕಾರದಲ್ಲಿ ಯಾವುದಾದರು ಅಧಿಕಾರದ ಸ್ಥಾನದ ಆಕಾಂಕ್ಷೆ ತಮ್ಮಲ್ಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆ.ಎಸ್.ಕೆ ನನಗೆ ಡಿ.ಕೆ.ಶಿವಕುಮಾರ್ ಒಬ್ಬರೇ ಅಲ್ಲ, ಸಿದ್ದರಾಮಯ್ಯರವರು, ಡಾ. ಜಿ. ಪರಮೇಶ್ವರ್ ಹಾಗೂ ಬಿ.ಕೆ. ಹರಿಪ್ರಸಾದ್ ರವರ ಹತ್ತಿರ ವಿಶ್ವಾಸದಲ್ಲಿ ಚೆನ್ನಾಗಿದ್ದೀನಿ. ನಾನು ಹೊಸದಾಗಿ ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ನನಗೆ ಯಾರು ದ್ವೇಷಿಗಳಿಲ್ಲ. ಇದುವರೆಗೂ ನಾನು ಯಾರ ಬಳಿ ಹೋಗಿ ಸ್ಥಾನ ಕೇಳಲಿಲ್ಲ. ನನಗೆ ಸ್ಥಾನಮಾನ ನೀಡುವ ವಿವೇಚನೆ ನಾಯಕರುಗಳಿಗೆ ಬಿಟ್ಟ ವಿಚಾರ ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತನಾಡಿದರು.


ಈ ಸಂದರ್ಭದಲ್ಲಿ ಬಗರ್ ಹುಕುಂ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಬೆಸ್ಕಾಂ ಎಇಇ ಗವಿರಂಗಯ್ಯ, ಸಿಡಿಪಿಒ ಹೊನ್ನಪ್ಪ, ಸೇವಾ ದಳದ ಕೆ.ಜಿ. ಕೃಷ್ಣೇಗೌಡ, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.